Select Your Language

Notifications

webdunia
webdunia
webdunia
webdunia

ನಿರಪರಾಧಿ ಎಂದಾದರೆ ಸಿದ್ದರಾಮಯ್ಯ ಪ್ರೂವ್ ಮಾಡಲಿ: ಗೋವಿಂದ ಕಾರಜೋಳ ಸವಾಲು

Govind Karajola

Krishnaveni K

ಬೆಂಗಳೂರು , ಮಂಗಳವಾರ, 20 ಆಗಸ್ಟ್ 2024 (14:38 IST)
ಬೆಂಗಳೂರು: ಸಿದ್ದರಾಮಯ್ಯನವರು ತನಿಖೆ ಎದುರಿಸಿ ಆರೋಪಮುಕ್ತರಾಗಿ ಹೊರಬರಬೇಕು ಎಂದು ಸಂಸದ ಗೋವಿಂದ ಕಾರಜೋಳ ಅವರು ತಿಳಿಸಿದರು.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಮೇಲೆ ಆರೋಪ ಬಂದಾಗ ಅವರನ್ನು ಅಪರಾಧಿ ಎನ್ನುವುದಿಲ್ಲ. ನಿರಪರಾಧಿ ಎಂದು ಸಾಬೀತುಪಡಿಸುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ ಎಂದು ನುಡಿದರು. ಅದಕ್ಕಾಗಿ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕಿತ್ತು ಎಂದರು.

ಅದನ್ನು ಬಿಟ್ಟು ಸಾಂವಿಧಾನಿಕ ಹುದ್ದೆಯಲ್ಲಿರುವ, ರಾಷ್ಟçಪತಿಗಳ ಪ್ರತಿನಿಧಿ ಎನಿಸಿದ ರಾಜ್ಯಪಾಲರನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಂಸ್ಕೃತಿ ಎಂಬುದು ಇದೆಯೇ ಎಂದು ಕೇಳಿದರು. ಸಾಮಾಜಿಕ ನ್ಯಾಯದ ಗಂಧವೇ ತಿಳಿಯದವರು ಕಾಂಗ್ರೆಸ್ಸಿಗರು. ಚಪ್ಪಲಿಯಿಂದ ರಾಜ್ಯಪಾಲರ ಫೋಟೊಗೆ ಹೊಡೆದುದಲ್ಲದೆ ಅವರ ಭಾವಚಿತ್ರ ಸುಟ್ಟಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ದಲಿತ ವ್ಯಕ್ತಿ ರಾಜ್ಯಪಾಲರ ಹುದ್ದೆಯಲ್ಲಿ ಇರುವುದು ನಿಮ್ಮ ಗಮನದಲ್ಲಿಲ್ಲವೇ? ಡಾ. ಅಂಬೇಡ್ಕರರಿಗೆ ಅವಮಾನ ಮಾಡಿದ ಕಾಂಗ್ರೆಸ್ಸಿಗರಿಗೆ ಸಂಸ್ಕೃತಿ ಇರಲು ಸಾಧ್ಯವೇ ಎಂದು ಕೇಳಿದರು.

ಹಿಂದೆ ತುಮಕೂರಿನ ಎಂ.ವಿ.ರಾಮರಾವ್ ಎಂಬವರು ಗೃಹ ಸಚಿವರಾಗಿದ್ದರು. ಅವರ ಜಿಲ್ಲೆಯಲ್ಲಿ ರೈತರ ಮೇಲೆ ಲಾಠಿಚಾರ್ಜ್, ಗೋಲಿಬಾರ್ ಆದುದು ವಿಧಾನಸಭೆಯಲ್ಲಿ ಚರ್ಚೆಗೆ ಬಂದಿತ್ತು. ಶಾಂತವೇರಿ ಗೋಪಾಲಗೌಡರು ವಿಧಾನಸಭಾ ಸ್ಪೀಕರ್ ಆಗಿದ್ದರು. ಗೃಹ ಸಚಿವರೇ ನಿಮ್ಮ ಮಗನ ಮೇಲೆ ಲಾಠಿಚಾರ್ಜ್, ಗೋಲಿಬಾರ್ ಆಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಸ್ಪೀಕರ್ ಕೇಳಿದ್ದು, ಎಂ.ವಿ.ರಾಮರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆದರ್ಶ ವ್ಯಕ್ತಿ ಆಗಿದ್ದರು ಎಂದು ತಿಳಿಸಿದರು.
ರಾಮಕೃಷ್ಣ ಹೆಗಡೆಯವರ ಮೇಲೆ ಟೆಲಿಫೋನ್ ಕದ್ದಾಲಿಕೆ ಆರೋಪ ಬಂದಾಗ ರಾಜೀನಾಮೆ ಕೊಟ್ಟಿದ್ದರು. ಕಾಂಗ್ರೆಸ್ಸಿನವರೇ ಆದ ಲಾಲ್ ಬಹದ್ದೂರ್ ಶಾಸ್ತಿçಯವರು ರೈಲ್ವೆ ಸಚಿವರಾಗಿದ್ದಾಗ ರೈಲು ಅವಘಡ ನಡೆದಿದ್ದು, ನಿಷ್ಪಕ್ಷಪಾತ ತನಿಖೆಗಾಗಿ ರಾಜೀನಾಮೆ ನೀಡಿದ್ದರು ಎಂದು ವಿವರಿಸಿದರು.
 
ಎಂಎಲ್‌ಸಿ ಸ್ಥಾನದಿಂದ ವಜಾ ಮಾಡಿ..
ಎಂಎಲ್‌ಸಿ ಐವಾನ್ ಡಿಸೋಜ ಅವರು ಬಾಂಗ್ಲಾದ ಪರಿಸ್ಥಿತಿ ಕರ್ನಾಟಕದಲ್ಲೂ ಬರಲಿದೆ; ರಾಜಭವನಕ್ಕೆ ನುಗ್ಗಿ ತೊಂದರೆ ಮಾಡುತ್ತೇವೆ ಎಂದಿದ್ದಾರೆ. ಐವಾನ್ ಡಿಸೋಜ ಅವರಿಗೆ ಪಾಕ್ ಉಗ್ರರ ನಂಟಿದೆಯೇ ಎಂಬ ಸಂಶಯ ನನಗೆ ಬರುತ್ತಿದೆ ಎಂದು ತಿಳಿಸಿದರು. ಅವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಂಡು ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಲು ಆಗ್ರಹಿಸಿದರು. ಎಂಎಲ್‌ಸಿ ಸ್ಥಾನದಿಂದ ವಜಾ ಮಾಡಲು ಗೋವಿಂದ ಕಾರಜೋಳ ಅವರು ಒತ್ತಾಯಿಸಿದರು.
 
ಈಚೆಗೆ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 2 ಪ್ರಮುಖ ಹಗರಣಗಳಲ್ಲಿ ಸಿಲುಕಿದ್ದಾರೆ. ಮೂಡದಲ್ಲಿ ಅನಧಿಕೃತ- ಕಾನೂನುಬಾಹಿರವಾಗಿ ಅವರ ಪತ್ನಿ ಹೆಸರಿನಲ್ಲಿ 14 ನಿವೇಶನಗಳನ್ನು ಪಡೆದಿರುವುದು, ರಾಜ್ಯದ ಪರಿಶಿಷ್ಟ ಜಾತಿ- ಜನಾಂಗಗಳಿಗೆ ಸೇರಿದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗಲುದರೋಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದರು.
ಮೂಡ ಹಗರಣದಲ್ಲಿ ಆರ್‌ಟಿಐ ಕಾರ್ಯಕರ್ತರ ಅಬ್ರಹಂ ಅವರು, ಈ ಕುರಿತ ಲೂಟಿಯ ವಿವರ ಪಡೆದು ಕೇಸು ದಾಖಲಿಸಿದ್ದಾರೆ. ಯುಪಿಎ ಆಡಳಿತ ಇದ್ದಾಗ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಳಿಸಿದ್ದಾಗಿ ಕಾಂಗ್ರೆಸ್ಸಿನವರು ಡಂಗೂರ ಸಾರುತ್ತ ಓಡಾಡಿದರು. ಅವರೇ ತಂದ ಕಾಯ್ದೆಯನ್ನು ಈಗ ಅವರೇ ಗೌರವಿಸುವುದಿಲ್ಲ ಎಂದು ಆಕ್ಷೇಪಿಸಿದರು.

ಹಗರಣಗಳಲ್ಲಿ ಸಿಲುಕಿದ ಬಳಿಕ ಆ ಕಾನೂನಿಗೆ ಗೌರವಿಸುವ ಕನಿಷ್ಠ ಸೌಜನ್ಯ ಕೂಡ ಕಾಂಗ್ರೆಸ್ ನಾಯಕರಿಗೆ ಇಲ್ಲ. ಸಂವಿಧಾನದತ್ತವಾಗಿ ಪ್ರಮಾಣವಚನ ಸ್ವೀಕರಿಸಿ ಮುಖ್ಯಮಮಂತ್ರಿಯಾದ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರು ಅವರ ಮೇಲೆ ಆಪಾದನೆ ಬಂದಾಗ ಉತ್ತರ ಕೊಡಬೇಕಿತ್ತು. ಸಾಚಾ ಎಂದು ಸಾಬೀತು ಮಾಡಬೇಕಿತ್ತು. ಆದರೆ, ನಾನೊಬ್ಬ ಹಿಂದುಳಿದ ವರ್ಗಕ್ಕೆ ಸೇರಿದ ನಾಯಕ. ನನ್ನ ಮುಖಕ್ಕೆ ಮಸಿ ಬಳಿಯಲು, ವ್ಯಕ್ತಿತ್ವಕ್ಕೆ ಧಕ್ಕೆ ತರಲು ಬಿಜೆಪಿ- ಜೆಡಿಎಸ್‌ನವರು ಹುನ್ನಾರ ನಡೆಸಿದ್ದಾಗಿ ಆರೋಪಿಸಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ 13 ವರ್ಷಗಳ ಕಾಲ, ದೇಶದ ಪ್ರಧಾನಿಯಾಗಿ 10ಕ್ಕೂ ಹೆಚ್ಚು ವರ್ಷ ಸೇರಿ ಸುಮಾರು 24 ವರ್ಷಗಳ ಕಾಲ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಅವರು ಯಾವತ್ತೂ ಕೂಡ ಜಾತಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರಲಿಲ್ಲ; ಜಾತಿಯ ರಕ್ಷಣೆ ಪಡೆಯಲಿಲ್ಲ. ಅವರ ಪ್ರತಿಭೆ, ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಈ ಹುದ್ದೆಗಳನ್ನು ಅಲಂಕರಿಸಿದ್ದಾರೆ; ಪ್ರಪಂಚಕ್ಕೇ ಆದರ್ಶ ಪ್ರಧಾನಿಯಾಗಿ ಹೊರಹೊಮ್ಮಿದ್ದಾರೆ ಎಂದು ವಿವರಿಸಿದರು. ಪ್ರಧಾನಿ ಅವರ ಬಗ್ಗೆ ಕಾಂಗ್ರೆಸ್ಸಿನವರು ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಆಕ್ಷೇಪಿಸಿದರು. 
 
 

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕತ್ತಾ ವೈದ್ಯೆ ರೇಪ್, ಮರ್ಡರ್ ಮಾಡಿದ ಆರೋಪಿ ಸಂಜಯ್ ತನ್ನ ಪತ್ನಿಗೇ ಯಾವ ಪರಿ ಕಾಟ ಕೊಟ್ಟಿದ್ದ ಗೊತ್ತಾ