Select Your Language

Notifications

webdunia
webdunia
webdunia
webdunia

ನನ್ನ ವಿರುದ್ಧ ಹೊಟ್ಟೆಯುರಿಗೆ ಬಿಜೆಪಿಯವರು ಮಾಡಬಾರದ್ದನ್ನೆಲ್ಲಾ ಮಾಡ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

Siddaramaiah KPCC

Krishnaveni K

ಬೆಂಗಳೂರು , ಮಂಗಳವಾರ, 20 ಆಗಸ್ಟ್ 2024 (13:32 IST)
ಬೆಂಗಳೂರು: ರಾಜೀವಗಾಂಧಿ ಹಾಗೂ ದೇವರಾಜ ಅರಸರ ಬದುಕು- ಕೆಲಸಗಳು ನಮಗೆ ಮಾರ್ಗದರ್ಶಿಯಾಗಿದೆ. ಅವರ ಹಾದಿಯಲ್ಲಿ ನಾವು ನಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಸದ್ಭಾವನಾ ದಿನಾಚರಣೆ ಹಾಗೂ ಡಿ. ದೇವರಾಜ ಅರಸು ಜಯಂತಿ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಭಯ ನಾಯಕರಿಗೆ ಗೌರವ ಸಲ್ಲಿಸಿ ಮಾತನಾಡಿದರು.

ರಾಜೀವ್‌ ಗಾಂಧಿಯವರು ಚಿಕ್ಕ ವಯಸ್ಸಿನಲ್ಲಿಯೇ ದೇಶದ ಪ್ರಧಾನಿಯಾಗಿದ್ದರು. ಅವರು ಪ್ರಧಾನಿಯಾಗಿದ್ದಾಗ ಆಧುನಿಕ ಭಾರತದ ಕನಸನ್ನು ಕಂಡಿದ್ದರು. ಯುವಜನತೆಯ ಮೇಲೆ ಅಪಾರ ವಿಶ್ವಾಸವಿಟ್ಟುಕೊಂಡಿದ್ದರು.

ಅವರು ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. ಯಾವಾಗಲೂ ಸಾಮಾಜಿಕ ನ್ಯಾಯದ ಪರವಿದ್ದರು. ದೇಶದಲ್ಲಿ ಬದಲಾವಣೆ ಆಗಬೇಕು. ಸಮಾನ ಅವಕಾಶ ಸಿಗಬೇಕು ಎಂದು ಹಂಬಲಿಸಿದರು. ಯಾವುದೇ ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ ಭೇದ ಮರೆತು, ಎಲ್ಲೇ ಇದ್ದರೂ ಭಾರತೀಯರು ಒಗ್ಗಟ್ಟಾಗಿರಬೇಕು ಎಂಬ ಕನಸನ್ನು ಕಂಡಿದ್ದರು.
ವಿಶೇಷವಾಗಿ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಪಾಲು ಸಿಗಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಂವಿಧಾನಕ್ಕೆ 73 ಮತ್ತು 74 ನೇ ತಿದ್ದುಪಡಿ ಜಾರಿಗೆ ತಂದರು. ಈ ದೇಶದಲ್ಲಿ ಏನಾದರೂ ಮಹಿಳೆಯರಿಗೆ ರಾಜಕೀಯದಲ್ಲಿ ಪಾಲು ಸಿಕ್ಕಿದ್ದರೆ, ಸಂವಿಧಾನಕ್ಕೆ ತಂದ ಈ ತಿದ್ದುಪಡಿಗಳು ಕಾರಣ ಎಂದು ಹೇಳ ಬಯಸುತ್ತೇನೆ ಎಂದರು.

ಭಾರತೀಯ ಜನತಾ ಪಕ್ಷದವರು ತಾವು ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡವರ ಪರ ಎಂದು ಎಷ್ಟೇ ಹೇಳಿಕೊಂಡರೂ, ಅವರು ಬಡವರು , ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರ ಇರಲು ಸಾಧ್ಯವೇ ಇಲ್ಲ. ಬಡವರಿಗೆ ಅವರು ಯಥಾ ಸ್ಥಿತಿಯಲ್ಲಿರಬೇಕು. ಅವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬರಬಾರದು ಎಂದು ಬಯಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಯಿ ಮಾತೇ ಬೇರೆ, ಕೃತಿಯೇ ಬೇರೆ.
ಇವತ್ತು ದೇಶದ ಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಗೆ ರಾಜೀವ ಗಾಂಧಿಯವರು ಕಾರಣ. ರಾಜೀವ ಗಾಂಧಿಯವರು ಯುವ ಶಕ್ತಿ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಆದ್ದರಿಂದ ಮತದಾನದ ವಯಸ್ಸು 21 ರಿಂದ 18 ಕ್ಕೆ ಇಳಿಸಿದರು. ಅವರು ಇನ್ನೂ ಬದುಕಿರಬೇಕಾಗಿತ್ತು. ಅವರು ಇದ್ದಿದ್ದರೆ ದೇಶದಲ್ಲಿ ನಿಜವಾದ ಬದಲಾವಣೆ ಆಗಿರುತ್ತಿತ್ತು. ದೂರದೃಷ್ಟಿ, ದೇಶ, ಸಮಾಜದ ಬಗ್ಗೆ ಕಾಳಜಿ ಇದ್ದವರು, ಬಹಳ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನು ಅಗಲಿದರು ಎಂದು ವಿಷಾದಿಸಿದರು.

ದೇವರಾಜ ಅರಸು ಅವರು 1972 ರಿಂದ ದೀರ್ಘ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು.
ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ಹಾವನೂರ ಆಯೋಗದ ರಚನೆ ಮಾಡಿ, ಹಿಂದುಳಿದವರಿಗೆ ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿ ಒದಗಿಸಿದರು; ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ರಾಜಕೀಯವಾಗಿ ಗುರುತಿಸಿ, ಅವರಿಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಕೊಟ್ಟರು. ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವೇ ಇಲ್ಲ ಎಂದುಕೊಂಡವರೂ ವಿಧಾನ ಸೌಧ ಪ್ರವೇಶಿಸುವಂತೆ ಮಾಡಿದರು ಎಂದರು.

ಈ ಕುರಿತು ಪತ್ರಿಕೆಯಲ್ಲಿ ಓದಿದ ಘಟನೆಯೊಂದನ್ನು ನೆನಪಿಸಿ ಕೊಂಡ ಮುಖ್ಯಮಂತ್ರಿಗಳು, “ಅರಸು ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಜಾಫರ್‌ ಷರೀಫ್‌ ಅವರಿಗೆ ಟಿಕೆಟ್‌ ಕೊಟ್ಟರು. ನಾಗರತ್ನಮ್ಮ ಅವರು ಜಟಕಾ ಗಾಡಿ ಓಡಿಸುವವರಿಗೆ ಟಿಕೆಟ್‌ ಕೊಡ್ತೀಯಲ್ಲ ಎಂದು ಕೇಳಿದರು. ನೋಡಮ್ಮಾ, ಇನ್ನು ಮೇಲೆ ಜಟಕಾ ಸಾಹೇಬರಿಗೆ, ಕ್ಷೌರ ಮಾಡುವವರಿಗೆ ಟಿಕೆಟ್‌ ಕೊಡೋದು, ಶೋಕಿ ಮಾಡುವವರಿಗಲ್ಲ ಎಂದು ಉತ್ತರಿಸಿದರಂತೆ” ಎಂದು ತಾವು ಓದಿದ್ದನ್ನು ಸ್ಮರಿಸಿದರು.

ಮಲ ಹೊರುವ ಪದ್ಧತಿ, ಜೀತ ಪದ್ಧತಿ ನಿಷೇಧ, ಸಾಲ ಮನ್ನಾ ಇಂತಹ ಅನೇಕ ಪ್ರಗತಿ ಪರ ಕಾನೂನುಗಳನ್ನು ಮಾಡಿದ ಅವರು, ಅರಸು ಮನೆತನದಲ್ಲಿ ಹುಟ್ಟಿದರೂ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದರು.

ಅಂತೆಯೇ ಕಾಂಗ್ರೆಸ್‌ ಪಕ್ಷ ಅಸಮಾನತೆಯನ್ನು ಹೋಗಲಾಡಿಸಲು ಬಯಸುತ್ತದೆ. ಈಗಲೂ ಅಸಮಾನತೆ ವಿರುದ್ಧ ಹೋರಾಟ ಮಾಡುತ್ತಿದೆ. ಅದಕ್ಕೆ ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಅಸಮಾನತೆ ವಿರುದ್ಧ ಕಾರ್ಯಕ್ರಮ ನೀಡುತ್ತೇನೆಂಬ ಕಾರಣಕ್ಕೇ ಬಿಜೆಪಿ ನನ್ನನ್ನು ಸಹಿಸುತ್ತಿಲ್ಲ ಎಂದು ತಿಳಿಸಿದರು. ಈಗ ಗ್ಯಾರಂಟಿಗಳನ್ನು ಜಾರಿ ಮಾಡಿದ್ದಕ್ಕೆ ಹೊಟ್ಟೆಯುರಿಯಿಂದ ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ. ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಸಂಜೆ ಸುರಿದ ಮಳೆಗೆ ರಸ್ತೆ ಸ್ವಿಮ್ಮಿಂಗ್ ಪೂಲ್: ಇನ್ನೆಷ್ಟು ದಿನ ಮಳೆಯಿರಲಿದೆ ಇಲ್ಲಿದೆ ವಿವರ