ಬೆಂಗಳೂರು: ಭಾರತದ ನಾಗರಿಕರು ಕೆಲವೇ ಕೆಲವು ರಾಷ್ಟ್ರಗಳಿಗೆ ವೀಸಾ ಇಲ್ಲದೇ ತೆರಳಬಹುದಾಗಿದೆ. ಅಂತಹ ರಾಷ್ಟ್ರಗಳಲ್ಲಿ ನಮ್ಮ ನೆರೆಯ ರಾಷ್ಟ್ರ ಭೂತಾನ್ ಕೂಡಾ ಒಂದು.
ಭೂತಾನ್ ಈಗ ಭಾರತದಿಂದ ತೆರಳುವ ಪ್ರವಾಸಿಗರಿಗೆ ಮೆಚ್ಚಿನ ತಾಣವಾಗಿದೆ. ಇದಕ್ಕೆ ಅಲ್ಲಿನ ಶಾಂತ ಪರಿಸರವೂ ಒಂದು. ಬೆಂಗಳೂರಿನಿಂದ ಭೂತಾನ್ ಗೆ ತೆರಳಲು ಮಾರ್ಗ ಯಾವುದು, ಎಷ್ಟು ಖರ್ಚಾಗುತ್ತದೆ ಮತ್ತು ಅಲ್ಲಿನ ವಿಶೇಷತೆ ಬಗ್ಗೆ ಇಂದು ನಾವು ನೋಡೋಣ.
ಬೆಂಗಳೂರಿನಿಂದ ಭೂತಾನ್ ಪ್ರವಾಸ
ಬೆಂಗಳೂರಿನಿಂದ ಭೂತಾನ್ ಗೆ ತೆರಳುವುದಿದ್ದರೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ನೇರವಾಗಿ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ತೆರಳಬೇಕು. ಅಲ್ಲಿಂದ ಭೂತಾನ್ ಗೆ ರಸ್ತೆ ಮಾರ್ಗವಾಗಿ ತೆರಳಬಹುದಾಗಿದೆ. ಸುಮಾರು 50 ಸಾವಿರ ರೂ.ಗಳಿದ್ದರೆ ಭೂತಾನ್ ದೇಶ ಪ್ರವಾಸ ಮಾಡಿ ಬರಬಹುದು.
ಭೂತಾನ್ ಗೆ ಪ್ರವಾಸ ಮಾಡಲು ನಿಮ್ಮ ಬಳಿ ವೀಸಾ, ಪಾಸ್ ಪೋರ್ಟ್ ಯಾವುದೂ ಬೇಕಾಗಿಲ್ಲ. ಭಾರತೀಯ ನಾಗರಿಕರಿಗೆ ಅಂತಹದ್ದೊಂದು ವಿನಾಯ್ತಿ ಇದೆ. ಆದರೆ ಆಧಾರ್ ಕಾರ್ಡ್ ಕೊಂಡೊಯ್ಯುವುದು ಕಡ್ಡಾಯ. ಇದನ್ನೇ ಗುರುತಿನ ಚೀಟಿಯಾಗಿ ತೋರಿಸಿದರೆ ಸಾಕು.
ಭೂತಾನ್ ನಲ್ಲಿ ಹಾರ್ನ್ ಇಲ್ಲ!
ನಮ್ಮಲ್ಲಿ ಒಂದು ಗಳಿಗೆ ರಸ್ತೆಗಿಳಿದರೆ ಸಾಕು ವಾಹನಗಳ ಹಾರ್ನ್, ಟ್ರಾಫಿಕ್ ನಿಂದ ಹೈರಾಣಾಗಿ ಹೋಗುತ್ತೇವೆ. ಆದರೆ ಭೂತಾನ್ ನಲ್ಲಿ ರಸ್ತೆಗಿಳಿದರೆ ಒಂದೂ ವಾಹನವೂ ಹಾರ್ನ್ ಮಾಡಲ್ಲ. ಭೂತಾನ್ ಮೂಲತಃ ಬೌದ್ಧ ಧರ್ಮೀಯರ ನಾಡು. ಅವರು ಶಾಂತಿ ಪ್ರಿಯರು. ಹೀಗಾಗಿ ಇಲ್ಲಿ ಹಾರ್ನ್ ಗಳ ಕರ್ಕಶ ಶಬ್ಧ ಮಾಡುವಂತಿಲ್ಲ. ಇನ್ನು, ಟ್ರಾಫಿಕ್ ಸಿಗ್ನಲ್ ಗಳೂ ಇಲ್ಲ.
ಸಾಕಷ್ಟು ಬೆಟ್ಟ ಗುಡ್ಡಗಳು, ಬೌದ್ಧರ ತಾಣಗಳಿಗೆ ಭೇಟಿ ಕೊಡಬಹುದು. ಆದರೆ ಬಹುಶಃ ನಮ್ಮ ದಕ್ಷಿಣ ಭಾರತೀಯರಿಗೆ ಅಲ್ಲಿ ಊಟ, ತಿಂಡಿಗೆ ಕಷ್ಟವಾಗಬಹುದು. ನಮ್ಮ ಯಾವುದೇ ಆಹಾರಗಳು ಅಲ್ಲಿ ಸಿಗಲ್ಲ. ಅದಕ್ಕಾಗಿ ಆದಷ್ಟು ತಿಂಡಿ, ಇನ್ ಸ್ಟ್ಯಾಂಟ್ ಪ್ಯಾಕೆಟ್ ಗಳನ್ನು ತೆಗೆದುಕೊಂಡರೆ ಹೋದರೆ ಉತ್ತಮ.