ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿಲು ರಾಜ್ಯ ಸರ್ಕಾರ ಮಿನಿ ವಿಮಾನ ನಿಲ್ದಾಣ ಅಥವಾ ಹೆಲಿಪೋರ್ಟ್ ನಿರ್ಮಿಸಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಕೊಡಗಿನ ಸ್ಥಳವನ್ನು ಗುರುತು ಮಾಡಿ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಪರಿಶೀಲನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆ ಸ್ಥಳದಲ್ಲೇ ಮಿನಿ ವಿಮಾನ ನಿಲ್ದಾಣ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಮತ್ತಷ್ಟು ಚೇತರಿಕೆ ಕಾಣುವ ಎಲ್ಲಾ ಅಂಶಗಳು ಕಂಡು ಬರುತ್ತಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸೈನಿಕ ಶಾಲೆಯ ಪಕ್ಕದಲ್ಲಿರುವ 49.5 ಎಕರೆ ಕೃಷಿ ಇಲಾಖೆಯ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ಅಥವಾ ಹೆಲಿಪೋರ್ಟ್ ನಿರ್ಮಿಸಲಾಗುವುದು ಎಂದು ಕೆಲವು ದಿನಗಳ ಹಿಂದೆ ಪ್ರಸ್ತಾಪಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅಧಿಕಾರಿಗಳು ಮತ್ತು ತಾಂತ್ರಿಕ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆಎಸ್ಐಐಡಿಸಿ) ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಎಂಆರ್ ರವಿ, ಡಿ.ಎಂ. ಪೂರ್ವಿಮಠ್(ವಿಎಸ್ಎಂ), ಕೆಎಸ್ಐಐಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ. ಪ್ರಕಾಶ್, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಪ್ರಾಜೆಕ್ಟ್ ತಾಂತ್ರಿಕ ಸಲಹೆಗಾರ ಬ್ರಿಗ್ ಹೀಗೆ ಮತ್ತಿತರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ನಡೆಸಿರುವ ಭೂಮಿ ಚಿಕ್ಕತ್ತೂರು ಗ್ರಾಮದಲ್ಲಿದ್ದು, 20 ಆಸನಗಳ ವಿಮಾನಗಳು ಇಳಿಯಬಹುದಾದ ಮಿನಿ ವಿಮಾನ ನಿಲ್ದಾಣ ಅಥವಾ ಮೈಸೂರು, ಹಂಪಿ ಹಾಗೂ ಚಿಕ್ಕಮಗಳೂರಿನ ಯೋಜಿತ ಹೆಲಿ-ಪೋರ್ಟ್ಗಳನ್ನು ಸಂಪರ್ಕಿಸುವ ಹೆಲಿ-ಪೋರ್ಟ್ ಅನ್ನು ನಿರ್ಮಿಸಲು ಯೋಜಿಸಲಾಗಿದೆ. ಈ ಎರಡೂ ಯೋಜನೆಗಳು ಕೊಡಗು ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಲಿವೆ.