ಬೆಂಗಳೂರು: ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ವಿಫಲವಾಗಿದ್ದ ಸರಕಾರ, ಇದೀಗ ಕೋಮುವಾದಿ ವೈರಸ್ ಅನ್ನು ನಿಯಂತ್ರಿಸುವಲ್ಲಿಯೂ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ.
ವಾರ್ತಾ ಭಾರತಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಚುನಾವಣಾ ಲಾಭಕ್ಕಾಗಿ ಬಿಜೆಪಿ ಮತ್ತು ಆರೆಸ್ಸೆಸ್ ಸಮುದಾಯಗಳು ಮತ್ತು ವ್ಯಕ್ತಿಗಳ ನಡುವೆ ದ್ವೇಷದ ಬೀಜಗಳನ್ನು ಬಿತ್ತುವ ಮೂಲಕ ಧ್ರುವೀಕರಣ ಮಾಡುತ್ತಿವೆ ಎಂದು ಕಿಡಿಗಾರಿದರು.
ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಗುರಿಯನ್ನಾಗಿಸಿಕೊಳ್ಳಲಾಗುತ್ತಿದೆ. ಹಿಂಸಾತ್ಮಕ, ವಿಧ್ವಂಸಕ ಕೃತ್ಯಗಳನ್ನು ಮತ್ತು ಗೂಂಡಾಗಿರಿಯನ್ನು ಆಶ್ರಯಿಸಲು ಬಲಪಂಥೀಯ ಸಂಘಟನೆಗಳು ಸರಕಾರದ ಮೌನ ಅನುಮೋದನೆಯೊಂದಿಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿವೆ ಎಂದು ಖಾದರ್ ದೂರಿದರು.
ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆಯ ಮೇಲಿನ ನಿಯಂತ್ರಣವನ್ನು ಸರಕಾರ ಕಳೆದುಕೊಂಡಿದೆ. ಅಶಾಂತಿ ಹಾಗೂ ಭಯದ ವಾತಾವರಣ ಸೃಷ್ಠಿಸುತ್ತಿರುವವರನ್ನು ಬಂಧಿಸಬೇಕು. ಅಲ್ಲದೆ, ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಮಾನಸಿಕ ಕಿರುಕುಳ ನೀಡುವವರ ವಿರುದ್ಧ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮಂಡ್ಯದ ಕಾಲೇಜೊಂದರ ಕ್ಯಾಂಪಸ್‌ನಲ್ಲಿ ಓರ್ವ ವಿದ್ಯಾರ್ಥಿನಿಗೆ ಕಿರುಕುಳ ನೀಡಿದವರ ವಿರುದ್ಧ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕಾಲೇಜುಗಳ ಕ್ಯಾಂಪಸ್‌ನಲ್ಲಿ ಹೋಗಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲು, ಕಾಲೇಜು ಕಟ್ಟಡಗಳ ಮೇಲೆ ಕಲ್ಲು ತೂರಾಟ ನಡೆಸಲು ಮತ್ತು ರಾಷ್ಟ್ರಧ್ವಜವನ್ನು ಇಳಿಸಿರುವ ಘಟನೆಗಳನ್ನು ನೋಡಿದರೆ, ಇದಕ್ಕೆ ಸರಕಾರದ ಬೆಂಬಲವಿಲ್ಲದೆ ಮಾಡಲು ಸಾಧ್ಯವಿಲ್ಲ ಎಂದು ಅವರು ದೂರಿದರು.
ಯಾವುದೆ ಕಾಲೇಜುಗಳಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಅದನ್ನು ಹತೋಟಿಗೆ ತರಲು ಸರಕಾರ ಜಿಲ್ಲಾಧಿಕಾರಿಗಳು, ಡಿಡಿಪಿಐಗಳು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ದಿನೇ ದಿನೇ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಈ ಘಟನೆಗಳ ಹಿಂದೆ ಇರುವ ಅಸಲಿ ಮುಖಗಳನ್ನ ತನಿಖೆ ಮಾಡಿ ಬಯಲಿಗೆಳೆಯಬೇಕು ಎಂದು ಖಾದರ್ ಒತ್ತಾಯಿಸಿದರು.
ರಾಜ್ಯ ಸರಕಾರ ಸಮಸ್ಯೆಯನ್ನು ಬಗೆಹರಿಸದೆ ಮೂರು ದಿನಗಳ ಕಾಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿರುವುದು ಇವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರಕಾರದ ವೈಫಲ್ಯದಿಂದಾಗಿ ವಿದ್ಯಾರ್ಥಿನಿಯರಿಗೆ ಆಗಿರುವ ಶೈಕ್ಷಣಿಕ ತೊಂದರೆಯನ್ನು ಸರಿಪಡಿಸಲು ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು ಎಂದು ಅವರು ಹೇಳಿದರು.