ಮಂಗಳೂರು: ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮಂಗಳೂರು-ಬೆಂಗಳೂರು ರೈಲ್ವೇ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ. ಜನರ ಬಹುದಿನಗಳ ಬೇಡಿಕೆ ಈಡೇರಿಸಿದೆ. ಹೊಸ ರೈಲಿನ ವೇಳಾಪಟ್ಟಿ ವಿವರ ಇಲ್ಲಿದೆ.
ಮಂಗಳೂರು ಜಂಕ್ಷನ್ ನಿಂದ ಯಶವಂತಪುರಕ್ಕೆ ವಾರಕ್ಕೆ ಮೂರು ಬಾರಿ ಸಂಚರಿಸುವ ರೈಲಿನ ಸಮಯ ಬದಲಾವಣೆ ಮಾಡುವಂತೆ ಬಹಳ ದಿನಗಳಿಂದ ಸಾರ್ವಜನಿಕರು ಒತ್ತಾಯ ಮಾಡುತ್ತಲೇ ಇದ್ದರು. ಈಗ ಇರುವ ವೇಳಾಪಟ್ಟಿ ಜನರಿಗೆ ಅನುಕೂಲವಾಗುತ್ತಿಲ್ಲ ಎಂಬುದು ಆಕ್ಷೇಪಕ್ಕೆ ಕಾರಣವಾಗಿತ್ತು.
ಆದರೆ ಈಗ ಕೊನೆಗೂ ರೈಲ್ವೇ ಇಲಾಖೆ ಜನರ ಒತ್ತಡಕ್ಕೆ ಮಣಿದು ಸಮಯ ಬದಲಾವಣೆ ಮಾಡಿದೆ. ಇನ್ನು ಮುಂದೆ ಈ ರೈಲು ಬೆಳಿಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30 ಕ್ಕೆ ಬೆಂಗಳೂರಿನ ಯಶವಂತಪುರಕ್ಕೆ ತಲುಪಲಿದೆ. ಈ ಬಗ್ಗೆ ಸ್ವತಃ ರೈಲ್ವೇ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಪ್ರಕಟಣೆ ನೀಡಿದ್ದಾರೆ.
ಸದ್ಯಕ್ಕೆ ಭಾರೀ ಮಳೆಯಿಂದ ಗುಡ್ಡ ಕುಸಿತವಾಗಿರುವ ಕಾರಣ ಮಂಗಳೂರು ಮತ್ತು ಬೆಂಗಳೂರು ನಡುವೆ ರೈಲ್ವೇ ಸಂಚಾರ ಸ್ಥಗಿತಗೊಳಿಸಲಾಗಿದೆ. ಎಡಕುಮೇರಿ ಬಳಿ ಗುಡ್ಡ ಕುಸಿತವಾಗಿದ್ದು, ರೈಲ್ವೇ ಮಾರ್ಗ ದುರಸ್ಥಿ ಬಳಿಕ ಸಂಚಾರ ಪುನರಾರಂಭವಾಗಲಿದೆ.