ಬೆಂಗಳೂರು: ರಾಜಧಾನಿಯ ನಾಗರಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಸಿಹಿ ಸುದ್ದಿ ನೀಡಿದೆ. 2025 ಹೊಸ ವರ್ಷಾಚರಣೆಗಾಗಿ ರೈಲು ಸೇವೆ ಅವಧಿ ವಿಸ್ತರಣೆ ಮಾಡಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು 2025ರ ಹೊಸ ವರ್ಷದ ಅಂಗವಾಗಿ ಮೆಟ್ರೋ ರೈಲು ಸೇವಾವಧಿಯನ್ನು ವಿಸ್ತರಿಸಿದೆ. ಮಧ್ಯರಾತ್ರಿ 2.40ರವರೆಗೂ ರೈಲು ಸೇವೆ ವಿಸ್ತರಿಸಿದೆ.
ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು ಜ.1 ರಂದು ಮುಂಜಾನೆ 2 ಗಂಟೆಗೆ ಎಲ್ಲ ಟರ್ಮಿನಲ್‍ನ ನಿಲ್ದಾಣಗಳಿಂದ ಹೊರಡಲಿದ್ದು, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ(ಮೆಜೆಸ್ಟಿಕ್)ನಿಂದ ಕೊನೆಯ ರೈಲು ಎಲ್ಲ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2:40 ಗಂಟೆಗೆ ಹೊರಡುತ್ತವೆ ಎಂದು ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ.
ಡಿಸೆಂಬರ್ 31ರ ರಾತ್ರಿ 11ರಿಂದ ಜನವರಿ 1 ಅಂದರೆ ಮುಂಜಾನೆ 2 ಗಂಟೆಯವರೆಗೆ 10 ನಿಮಿಷಗಳ ಮಧ್ಯಂತರದಲ್ಲಿ ರೈಲು ಕಾರ್ಯನಿರ್ವಹಿಸುತ್ತವೆ. ಆದರೆ ಎಂ.ಜಿ.ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಡಿಸೆಂಬರ್ 31ರಂದು ರಾತ್ರಿ 11 ಗಂಟೆಯಿಂದ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ದ್ವಾರಗಳನ್ನು ಮುಚ್ಚಲಾಗುತ್ತದೆ. ಪ್ರಯಾಣಿಕರ ಬಳಕೆಗಾಗಿ ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‍ನಲ್ಲಿ ರೈಲುಗಳು ನಿಲ್ಲುತ್ತವೆ ಎಂದು ಮಾಹಿತಿ ನೀಡಲಾಗಿದೆ.
ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ಯಾವುದೇ ನಿಲ್ದಾಣಕ್ಕೆ ರಾತ್ರಿ 11 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು 50 ರೂ. ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೇಟ್ ಅನ್ನು ಬಳಸಲು ಸೂಚಿಸಲಾಗಿದೆ.
ಈ ಕಾಗದ ಟಿಕೇಟ್ ಅನ್ನು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಡಿಸೆಂಬರ್ 31ರ ಬೆಳಗ್ಗೆ 8 ಗಂಟೆಯಿಂದ ಮುಂಗಡವಾಗಿ ಖರೀದಿಸಬಹುದಾಗಿದೆ. ಅಂತೆಯೇ ಸಾಮಾನ್ಯ ಕ್ಯೂಆರ್ ಕೋಡ್ ಟಿಕೆಟ್ ಮತ್ತು ಕಾರ್ಡ್‍ಗಳಿಂದ ಈ ನಿಲ್ದಾಣಗಳಿಂದ ಪ್ರಯಾಣಿಸಲು ಮಾನ್ಯವಾಗಿರುತ್ತವೆ.