Select Your Language

Notifications

webdunia
webdunia
webdunia
webdunia

ಜಾರ್ಜ್‌, ಲಿಂಬಾವಳಿ ಜಂಟಿಯಾಗಿ ಕೆರೆ ಅತಿಕ್ರಮಣ

ಜಾರ್ಜ್‌, ಲಿಂಬಾವಳಿ ಜಂಟಿಯಾಗಿ ಕೆರೆ ಅತಿಕ್ರಮಣ
bangalore , ಶುಕ್ರವಾರ, 1 ಏಪ್ರಿಲ್ 2022 (20:12 IST)
ಶಾಸಕರಾದ ಕೆ.ಜೆ.ಜಾರ್ಜ್‌ ಹಾಗೂ ಅರವಿಂದ್‌ ಲಿಂಬಾವಳಿ ಒಳ ಒಪ್ಪಂದ ಮಾಡಿಕೊಂಡು ಮಹದೇವಪುರ ಕ್ಷೇತ್ರದ ಪಟ್ಟಂದೂರು ಅಗ್ರಹಾರ ಕೆರೆಯ ಬಫರ್‌ ವಲಯವನ್ನು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಆರೋಪಿಸಿದೆ.
 
ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಆಪ್ ಅಧ್ಯಕ್ಷ ಮೋಹನ್‌ ದಾಸರಿ ಮಾಜಿ ಸಚಿವ ಕೆ.ಜೆ.ಜಾರ್ಜ್‌ ಅಂದಾಜು 20 ಎಕರೆ ಜಮೀನಿಗೆ ರಸ್ತೆ ನಿರ್ಮಿಸಲು ಪಟ್ಟಂದೂರು ಅಗ್ರಹಾರ ಕೆರೆಯ ಬಫರ್‌ ವಲಯ ಹಾಗೂ ಸಮೀಪದ ರಾಜಕಾಲುವೆಯನ್ನು ಒತ್ತುವರಿ ಮಾಡಲಾಗುತ್ತಿದೆ. ರಸ್ತೆ ನಿರ್ಮಾಣವನ್ನು ಈ ಹಿಂದೆ ವಿರೋಧಿಸಿದ್ದ ಸ್ಥಳೀಯ ಶಾಸಕ ಅರವಿಂದ್‌ ಲಿಂಬಾವಳಿ ಈಗ ಅಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ. ಇವರಿಬ್ಬರ ಸ್ವಾರ್ಥಕ್ಕೆ ಕೆರೆಯು ಬತ್ತಿಹೋಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
 
ಬಫರ್‌ ವಲಯವು ಕೆರೆಯ ಅವಿಭಾಜ್ಯ ಅಂಗ. ಬಫರ್‌ ವಲಯವನ್ನು ಅತಿಕ್ರಮಿಸಿಕೊಂಡು ರಸ್ತೆ ನಿರ್ಮಿಸಿದರೆ, ಕೆರೆಗೆ ನೀರು ಬರುವುದು ಕಡಿಮೆಯಾಗಲಿದೆ. ಈಗ ಇಲ್ಲಿ ಒತ್ತುವರಿಗೆ ಅವಕಾಶ ನೀಡಿದರೆ, ಭವಿಷ್ಯದಲ್ಲಿ ಇನ್ನಷ್ಟು ಕೆರೆಗಳಿಗೆ ಇದೇ ಸ್ಥಿತಿ ಬರಬಹುದು. ಪರಿಣಾಮವಾಗಿ ಇಡೀ ಬೆಂಗಳೂರಿನಲ್ಲಿ ಅಂತರ್ಜಲ ಇನ್ನಷ್ಟು ಕುಸಿಯಲಿದೆ. ಪಟ್ಟಂದೂರು ಕೆರೆಯ ಬಫರ್‌ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಯೋಜನೆಯು ಅಪಾಯಕಾರಿ ಎಂದು ತಜ್ಞರ ಸಮಿತಿ ಕೂಡ ಎಚ್ಚರಿಕೆ ನೀಡಿದೆ ಎಂದು ಮೋಹನ್‌ ದಾಸರಿ ಹೇಳಿದರು.
 
ಬಿಡಿಎಯಿಂದ ಅನುಮೋದನೆ ಸಿಗದಿದ್ದರೂ ರಸ್ತೆ ನಿರ್ಮಾಣ:
 
ಅಕ್ರಮದ ಕುರಿತು ವಿವರ ನೀಡಿದ ಮಹದೇವಪುರ ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್‌ ಮೃತ್ಯುಂಜಯ, ಬಿಡಿಎಯಿಂದ ಅನುಮೋದನೆ ಸಿಗದಿದ್ದರೂ ರಸ್ತೆ ನಿರ್ಮಿಸಲಾಗುತ್ತಿದೆ. ಅವಸರಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೇವಲ ಐದಾರು ತಿಂಗಳಿನಲ್ಲಿ ಅರ್ಧ ಕಿಲೋಮೀಟರ್‌ ರಸ್ತೆಗೆ ಜಾಗವನ್ನು ಮಟ್ಟ ಮಾಡಿ, ಜಲ್ಲಿಕಲ್ಲುಗಳನ್ನು ಹಾಕುವ ಹಂತಕ್ಕೆ ಬಂದಿದ್ದಾರೆ. ಇದೇ ವೇಗದಲ್ಲಿ ಬೆಂಗಳೂರಿನ ಇತರೆ ರಸ್ತೆಗಳ ಕಾಮಗಾರಿಯನ್ನೂ ನಡೆಸಿದ್ದರೆ, ರಾಜಧಾನಿಯಲ್ಲಿ ರಸ್ತೆಗುಂಡಿಗಳ ಸಮಸ್ಯೆಯೇ ಇರುತ್ತಿರಲಿಲ್ಲ. ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿ ದಾಖಲೆ ಒದಗಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.
 
ಲಿಂಬಾವಳಿಯವರ ನಿರ್ಲಕ್ಷ್ಯದಿಂದಾಗಿ ಕೆರೆ ಒತ್ತುವರಿ:
 
ಮಹದೇವಪುರ ಕ್ಷೇತ್ರದಲ್ಲಿ ಕೆರೆಗಳ ಒತ್ತುವರಿ ಹೊಸತೇನಲ್ಲ. ಲಿಂಬಾವಳಿಯವರ ಸ್ವಾರ್ಥ ಹಾಗೂ ನಿರ್ಲಕ್ಷ್ಯದಿಂದಾಗಿ ಜುನ್ನಸಂದ್ರ ಕೆರೆ, ಬೆಳ್ಳಂದೂರು ಕೆರೆ ಮತ್ತಿತರ ಕೆರೆಗಳು ಈಗಾಗಲೇ ಒತ್ತುವರಿಯಾಗಿದೆ. ಪಟ್ಟಂದೂರು ಕೆರೆಯ ಜಾಗವೂ ಅತಿಕ್ರಮಣವಾಗುವುದನ್ನು ಆಮ್‌ ಆದ್ಮಿ ಪಾರ್ಟಿ ಸಹಿಸುವ ಪ್ರಶ್ನೆಯೇ ಇಲ್ಲ. ರಸ್ತೆ ನಿರ್ಮಾಣದಿಂದ ಹಿಂದೆ ಸರಿಯದಿದ್ದರೆ, ಮಹದೇವಪುರ ಕ್ಷೇತ್ರದ 5,000ಕ್ಕೂ ಹೆಚ್ಚು ಜನರೊಂದಿಗೆ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ” ಎಂದು ಅಶೋಕ್‌ ಮೃತ್ಯುಂಜಯ ಎಚ್ಚರಿಕೆ ನೀಡಿದರು.
 
ಆಡಿಯೋ ಕ್ಲಿಪ್ಪಿಂಗ್ ಬಿಡುಗಡೆ:
 
ಮಾಜಿ ಸಚಿವ ಕೆ.ಜೆ.ಜಾರ್ಜ್‌ರವರ ಒತ್ತಡದಿಂದಾಗಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಕಾಮಗಾರಿಯ ಎಂಜಿನಿಯರ್‌ ಹೇಳಿರುವ ಫೋನ್‌ ಸಂಭಾಷಣೆ ಆಡಿಯೋವನ್ನು ಎಎಪಿ ನಾಯಕರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
 
ಬೆಂಗಳೂರು ನಗರ ರಾಜಕೀಯ ಚಟುವಟಿಕೆಗಳ ಮುಖ್ಯಸ್ಥ ಚನ್ನಪ್ಪಗೌಡ ನೆಲ್ಲೂರು, ಸ್ಥಳೀಯ ನಾಯಕರಾದ ಸಂದೀಪ್‌ ಇನ್ನಿತರ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಎಂಎ ಸಂಸ್ಥೆಯ ಗ್ರಾಹಕರಿಗೆ ಸಕ್ಷಮ ಪ್ರಾಧಿಕಾರದಿಂದ ಚಿನ್ನ ವಾಪಸ್