ಬೆಂಗಳೂರು: ಮಕರ ಸಂಕ್ರಾಂತಿಯ ದಿನವಾದ ಇಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ ವಿಶೇಷ ವಿಸ್ಮಯಕ್ಕೆ ಮೋಡ ಅಡ್ಡಿಯಾಗಿದ್ದು, ಭಕ್ತರಿಗೆ ನಿರಾಸೆಯಾಗಿದೆ.
ಸಂಜೆ 5:14 ರಿಂದ 5:17ರ ವರೆಗೆ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸಬೇಕಿತ್ತು. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿದ್ದರು. ಆದರೆ ಮೋಡ ಕವಿದ ವಾತಾವರಣದಿಂದ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ ಸಾಧ್ಯವಾಗಲಿಲ್ಲ.
ಮೊದಲು ದೇವರ ಅಭಿಷೇಕಕ್ಕೆ ಪೂರ್ಣಕುಂಭ ಕಳಸದೊಂದಿಗೆ ದೇವಸ್ಥಾನಕ್ಕೆ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಆಗಮಿಸಿದರು. ಈ ವೇಳೆ ಗವಿಗಂಗಾಧರೇಶ್ವರನಿಗೆ ಪೂರ್ಣಕುಂಭ ಅಭಿಷೇಕ ಮಾಡಲಾಯಿತು.
ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷಪೂಜೆ, ಅಲಂಕಾರದ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮಧ್ಯಾಹ್ನ ಗವಿಗಂಗಾಧರೇಶ್ವರ ದೇವಾಲಯ ಬಂದ್ ಮಾಡಲಾಗಿತ್ತು. ಮಧ್ಯಾಹ್ನ 12:30 ರಿಂದ ಸಂಜೆ 4ರ ವರೆಗೆ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ.
ಸೂರ್ಯ ರಶ್ಮಿ ಸ್ಪರ್ಶ ಕಣ್ತುಂಬಿಕೊಳ್ಳಲು ದೇವಾಲಯದ ಹೊರಗೆ ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ಸೂರ್ಯ ರಶ್ಮಿ ಸ್ಪರ್ಶವಾಗದ ಹಿನ್ನೆಲೆ, ಭಕ್ತರ ಆತಂಕ ದೂರ ಮಾಡಲು ದೇವಾಲಯದಲ್ಲಿ ಶಾಂತಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ.