Publish Date: Wed, 06 Sep 2017 (18:51 IST)
Updated Date: Wed, 06 Sep 2017 (19:00 IST)
ಕರುನಾಡಿನ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ಅವರ ಕೊನೆಯ ಕ್ಷಣವನ್ನ ಸಿಸಿಟಿವಿ ಬಿಚ್ಚಿಟ್ಟಿದೆ.
ಗೌರಿ ಲಂಕೇಶ್ ಮೇಲೆ 3 ಸುತ್ತು ಗುಂಡು ಹಾರಿಸಿದ ಬಳಿಕವೂ ಎದ್ದು ಮನೆಯೊಳಗೆ ತೆರಳಲು ಗೌರಿ ಲಂಕೇಶ್ ಯತ್ನಿಸಿದ್ದಾರೆ. ಆದರೆ, ದೇಹ ಸೀಳಿದ್ದ ಗುಂಡುಗಳಿಂದಾಗಿ ಗೌರಿ ಲಂಕೇಶ್ ಮುಂದೆ ತೆರಳಲು ಆಗದೇ ಕುಸಿದು ಬಿದ್ದಿದ್ದಾರೆ. ಗುಂಡಿನ ಸದ್ದು ಕೇಳಿ ಸ್ಥಳಕ್ಕಾಗಮಿಸಿದ ನೆರೆಹೊರೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೌರಿಯನ್ನ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗೌರಿ ಲಂಕೇಶ್ ಮನೆಯಲ್ಲಿ 4 ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು, ಗೌರಿ ಲಂಕೇಶ್ ಹತ್ಯೆಯ ದೃಶ್ಯಾವಳಿಗಳು ಹೊರಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೆಲಸದಿಂದ ಮನೆಗೆ ಬಂದ ಗೌರಿ ಲಂಕೇಶ್ ಟೊಯೋಟಾ ಎಟಿಯೋಸ್ ಕಾರಿನಿಂದ ಇಳಿದು ಮನೆ ಪ್ರವೇಶಿಸಲು ಮುಂದಾಗುತ್ತಾರೆ. ಈ ಸಂದರ್ಭ ಆಕೆ ಬಳಿಗೆ ಬಂದ ಹೆಲ್ಮೆಟ್ ಧರಿಸಿದ್ದ ದುಷ್ಕರ್ಮಿ ಪಿಸ್ತೂಲ್`ನಿಂದ ಗುಂಡುಗಳನ್ನ ಹಾರಿಸುತ್ತಾನೆ. ಮೂರು ಗುಂಡು ಗೌರಿ ಲಂಕೇಶ್ ದೇಹ ಹೊಕ್ಕಿದರೆ ಒಂದು ಗುಂಡು ಹಣೆಗೆ ಹೊಕ್ಕಿತ್ತು.
ಕ್ಯಾಮೆರಾದಲ್ಲಿ ಕಾಣುತ್ತಿರುವ ಹಂತಕ ಮತ್ತಿಬ್ಬರ ಜೊತೆ ಹತ್ಯೆ ಮಾಡಲು ಬಂದಿದ್ದ. ಆದರೆ, ಸಿಸಿಟಿವಿ ದೃಶ್ಯದಲ್ಲಿ ಬೈಕಿನ ನಂಬರ್ ಪ್ಲೇಟ್ ಕಾಣಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ