ಆಗಸ್ಟ್ 5ರಿಂದ 15ರವರೆಗೆ ನಗರದ ಪ್ರತಿಷ್ಠಿತ ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು. ಕೊವಿಡ್ ಸಾಂಕ್ರಾಮಿಕದ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಫಲ ಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು. ಈ ವರ್ಷದಿಂದ ಮತ್ತೆ ಆರಂಭವಾಗುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಜನಪ್ರಿಯ ಸಿನಿಮಾ ನಟರು ಮತ್ತು ಕರ್ನಾಟಕದ ಸಾಂಸ್ಕೃತಿಕ ಐಕಾನ್ಗಳು ಎಂದು ಖ್ಯಾತರಾದ ಡಾ.ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸಲಾಗಿದೆ ಎಂದು ಮುನಿರತ್ನ ತಿಳಿಸಿದರು. ಆಗಸ್ಟ್ 5ರಂದು ಲಾಲ್ಬಾಗ್ನಲ್ಲಿ 212ನೇ ಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಒಟ್ಟು 11 ದಿನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ. 2 ವರ್ಷದ ಬಳಿಕ ಫಲ, ಪುಷ್ಪ ಪ್ರದರ್ಶನ ಆಯೋಜನೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಲಾಲ್ಬಾಗ್ ಪ್ರವೇಶ ದರ ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.