ಬೆಂಗಳೂರು: ಬೃಹತ್ ಬೆಂಗಳೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮೇಲೆ ವಂಚನೆ ಆರೋಪ ಕೇಳಿ ಬಂದಿದ್ದು, ಸೊಸೈಟಿ ಮಾಲೀಕ ನೂರಾರು ಜನರಿಂದ ಕೋಟ್ಯಂತರ ಹಣ ಪಡೆದು ಪರಾರಿ ಆಗಿದ್ದಾನೆ ಎಂದು ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯಲ್ಲಿ ಘಟನೆ ವರದಿಯಾಗಿದೆ. ಶರೀಶ್ ಸುಬ್ರಾಯ ಹೆಗಡೆ ಎಂಬುವವರ ಒಡೆತನದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಳೆದ ಕೆಲವು ದಿನಗಳಿಂದ ಸೊಸೈಟಿಗೆ ಬೀಗ ಜಡಿಯಲಾಗಿದ್ದು, ಮಾಲೀಕ ಹಾಗೂ ಸಿಬ್ಬಂದಿ ನಾಪತ್ತೆ ಹಿನ್ನೆಲೆ ಗ್ರಾಹಕರು ಆತಂಕದಲ್ಲಿದ್ದಾರೆ.
ಮೊದಲು ಜನರ ನಂಬಿಕೆ ಗಳಿಸಿದ್ದ ಸೊಸೈಟಿ ಗೋಲ್ಡ್ ಲೋನ್ ಕೂಡ ಕೊಡುತ್ತಿತ್ತು. ಇದೀಗ ಜನರ ಚಿನ್ನದ ಸಮೇತ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಹಣ ಕಟ್ಟಿಸಿಕೊಂಡು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಕೊಟ್ಟಿರುವ ಚೆಕ್ ಗಳು ಕೂಡ ಬೌನ್ಸ್ ಆಗಿವೆ ಎನ್ನಲಾಗಿದೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಜನರಿಂದ ಹಣ ಕಟ್ಟಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ನ್ಯಾಯಕ್ಕಾಗಿ ಸಾವಿರಾರು ಮಂದಿ ಹೂಡಿಕೆದಾರರು ನ್ಯಾಯ ಕೊಡಿಸುವಂತೆ ಬಾಗಲಗುಂಟೆ ಪೊಲೀಸರ ಮೊರೆ ಹೋಗಿದ್ದಾರೆ.