ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದಡಿಯಲ್ಲಿ ಪ್ರಕರಣ ಎದುರಿಸುತ್ತಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕನೇ ಪ್ರಕರಣ ದಾಖಲಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮೂರು ಪ್ರಕರಣಗಳಿಗಿಂತ ಭಿನ್ನವಾಗಿ ನಾಲ್ಕನೇ ಪ್ರಕರಣವನ್ನು ದಾಖಲಿಸಲಾಗಿದೆ.
ನಾಲ್ಕನೇ ಪ್ರಕರಣವನ್ನು ಲೈಂಗಿಕ ಕಿರುಕುಳ, ಹಿಂಬಾಲಿಸುವಿಕೆ, ಸಂತ್ರಸ್ತೆಗೆ ಬೆದರಿಕೆ ಹಾಕುವುದು ಮತ್ತು ಸಂತ್ರಸ್ತೆಯ ವಿಡಿಯೋ ಹಾಗೂ ಫೋಟೋಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದು. ಅದಲ್ಲದೆ ವಿಡಿಯೋಗಳನ್ನು ಹಂಚಿಕೊಂಡ ಆರೋಪದಲ್ಲಿ ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡ ಸೇರಿದಂತೆ ಇತರ ಮೂವರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಪ್ರಜ್ವಲ್ ರೇವಣ್ಣ ಅವರು ವಿಡಿಯೋ ಕಾಲ್‌ನಲ್ಲಿ ಸಂತ್ರಸ್ತೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಸಂದರ್ಭದಲ್ಲಿ ರೆಕಾರ್ಡ್ ಮಾಡಿದ ಚಿತ್ರಗಳನ್ನು ಪ್ರೀತಂ ಗೌಡ, ಕಿರಣ್ ಮತ್ತು ಶರತ್ ಹಂಚಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳದ ರೆಕಾರ್ಡಿಂಗ್ ಮತ್ತು ಇತರರು ಕ್ಲಿಪ್ ಅನ್ನು ಹಂಚಿಕೊಂಡಿದ್ದರಿಂದ ಇಡೀ ಕುಟುಂಬಕ್ಕೆ ಮುಜುಗರ ಮತ್ತು ಇಮೇಜ್ ನಷ್ಟವಾಗಿದೆ ಎಂದು ಸಂತ್ರಸ್ತೆ ದೂರು ದಾಖಲಿಸಿದ್ದಾರೆ.
ನಾಲ್ಕನೇ ಎಫ್‌ಐಆರ್ ಅನ್ನು ಐಪಿಸಿ ಸೆಕ್ಷನ್‌ಗಳು 354 (ಎ), 354 (ಡಿ), 354 (ಬಿ), 506 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 ಇ ಅಡಿಯಲ್ಲಿ ದಾಖಲಿಸಲಾಗಿದೆ.