ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಕುಟುಂಬದ ಯಜಮಾನ ಶಂಕರ್ ಹಾಗೂ ಆತನ ಇಬ್ಬರು ಅಳಿಯಂದಿರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಹಲ್ಲೇಗೆರೆ ಶಂಕರ್, ಅಳಿಯ ಶ್ರೀಕಾಂತ್ ಹಾಗೂ ಪ್ರವೀಣ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 17ರಂದು ಬ್ಯಾಡರಹಳ್ಳಿಯ ತಿಗಳರ ಪಾಳ್ಯದ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ದುರ್ಘಟನೆಯಲ್ಲಿ ಮನೆಯ ಯಜಮಾನ ಶಂಕರ್ ಪತ್ನಿ ಭಾರತಿ, ಮಕ್ಕಳಾದ ಸಿಂಚನಾ, ಸಿಂಧೂರಾಣಿ, ಮಧುಸಾಗರ್ ಆತ್ಮಹತ್ಯೆ ಮಾಡಿಕೊಂಡರೆ 9 ತಿಂಗಳ ಹಸುಗೂಸನ್ನು ಆಕೆಯ ತಾಯಿ ಸಿಂಧೂರಾಣಿಯೇ ಕೊಲೆ ಮಾಡಿದ್ದಳು. ವೈದ್ಯಕೀಯ ಪರೀಕ್ಷೆಯಲ್ಲಿ ಕತ್ತು ಬಿಗಿದು ಕೊಲೆ ಮಾಡಿರುವುದು ದೃಢವಾಗಿತ್ತು.
ಸಾವಿನ ಮುನ್ನ ಮೃತರು ಬರೆದಿದ್ದ ಡೆತ್ನೋಟ್ನಲ್ಲಿ ಶಂಕರ್ ಹಾಗೂ ಅಳಿಯಂದಿರ ಕಿರುಕುಳದ ಬಗ್ಗೆ ಪ್ರಸ್ತಾಪಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಸ್ಥಳ ಮಹಜರು ವೇಳೆ ಮನೆಯಲ್ಲಿದ್ದ 3 ಲ್ಯಾಪ್‌ಟಾಪ್ ಅನ್ನು ವಶಕ್ಕೆ ಪಡೆದಿದ್ದರು.
ಜೊತೆಗೆ ಒಂದು ಪೆನ್ ಡ್ರೈವ್ ಅನ್ನು ಕೂಡ ಜಪ್ತಿ ಮಾಡಿಕೊಂಡು ಪರಿಶೀಲಿಸಿದ್ದರು. ಈವರೆಗಿನ ತನಿಖೆಯಲ್ಲಿ ಆತ್ಮಹತ್ಯೆಗೆ ಪರೋಕ್ಷವಾಗಿ ಪ್ರಚೋದನೆ ಕಂಡು ಬಂದ ಹಿನ್ನೆಲೆ, ಮೂವರನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!