Publish Date: Fri, 06 Jan 2023 (16:02 IST)
Updated Date: Fri, 06 Jan 2023 (16:05 IST)
ಕಳೆದ ಐವತ್ತು ವರ್ಷಗಳಿಂದ ಮಾಜಿ ಪ್ರಧಾನಿ ದೇವೇಗೌಡರು-ನನ್ನದ್ದು ತಂದೆ ಮಕ್ಕಳ ಸಂಬಂಧ. ನಾನೆಲ್ಲೆ ಇದ್ದರೂ ಅವರ ಹಾರೈಕೆ ನನ್ನ ಮೇಲೆ ಇದ್ದೇ ಇರುತ್ತೆ. ನಾನು ಜನವರಿ 15ರ ಬಳಿಕ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದತ್ತ ಅವರ ಸ್ವಗ್ರಾಮ ಯಗಟಿಯಲ್ಲಿ ಮಾತನಾಡಿದ ಅವರು, ನನ್ನನ್ನ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದ್ದೇ ದೇವೇಗೌಡರು. ಅದು ನನ್ನ ರಾಜಕೀಯ ಜೀವನಕ್ಕೆ ಸಿಕ್ಕ ತಿರುವು. ಇದೀಗ ಅನಿವಾರ್ಯವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಇದನ್ನ ಅವರಿಗೆ ಹೇಳಲು ಒಂದು ರೀತಿ ಮುಜುಗರವಾಗುತ್ತದೆ. ಆದರೆ, ದೇವೇಗೌಡರು ನನ್ನ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ ಎಂದು ಭಾವುಕರಾದರು. ಕಡೂರಿನಲ್ಲಿ ಜನಗಳ ನಿರಂತರ ಸಂಪರ್ಕದಲ್ಲಿದ್ದೇನೆ. ಕಳೆದ ಒಂದೂವರೆ ವರ್ಷದಿಂದಲೂ ತಾಲ್ಲೂಕಿನಲ್ಲಿ ಎಲ್ಲೇ ಹೋದರೂ ಕಾಂಗ್ರೆಸ್ ಸೇರಬೇಕೆಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಹಾಗಾಗಿ, ಜನಾಭಿಪ್ರಾಯ, ಅಭಿಮಾನಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯದಂತೆ ನನ್ನ ಸಮಾನ ಮನಸ್ಕ ಸ್ನೇಹಿತರಿರುವ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ಮಾಡಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷದಿಂದ ಕರೆ ಬಂದಿದ್ದು, ಜನವರಿ 15ರಂದು ಪಕ್ಷಕ್ಕೆ ಸೇರಲು ಸೂಚಿಸಿದ್ದಾರೆ. ಅಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುತ್ತೇನೆ ಎಂದರು.