Publish Date: Tue, 05 Apr 2022 (17:01 IST)
Updated Date: Tue, 05 Apr 2022 (18:03 IST)
ಪ್ರಾರ್ಥನಾ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶವನ್ನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೀದಿ, ಪ್ರಾರ್ಥನಾ ಮಂದಿರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಕಳೆದ ಆರು ತಿಂಗಳ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದೆ. ಮಸೀದಿ, ಮಂದಿರ ಮಾತ್ರವಲ್ಲ, ಕಾರ್ಖಾನೆ, ಪಬ್‍ಗಳಿಗೂ ಕೂಡ ನೋಟಿಸ್ ನೀಡಲಾಗಿದೆ. ಧರ್ಮ ಮುಖಂಡರ ಜತೆ ಸಭೆ ನಡೆಸಿ ಅವರಿಗೂ ಮಾರ್ಗದರ್ಶನ ನೀಡಲಾಗಿದೆ. ಅದರಂತೆ ಧರ್ಮಗುರುಗಳು ನಡೆದುಕೊಂಡಿದ್ದಾರೆ ಎಂದರು.
ಮಾಲಿನ್ಯ ನಿಯಂತ್ರಣ ಮಂಡಳಿಯೂ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ನಗರದಲ್ಲಿ ಈಗಾಗಲೇ ಹಲವು ಕಡೆ ಮೈಕ್‍ಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, 40ಕ್ಕೂ ಅಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾನೂನು ಉಲ್ಲಂಘಿಸಿದರೆ ಮುಂದೆಯೂ ಸಹ ಮೈಕ್‍ಗಳನ್ನು ಜಪ್ತಿ ಮಾಡುತ್ತೇವೆ. ಯಾರಾದರೂ ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವುದಾಗಿ ಕಮಲ್‍ಪಂತ್ ಅವರು ಎಚ್ಚರಿಸಿದರು. ಎಲ್ಲರೂ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಂಡು ಜೀವನ ನಡೆಸಬೇಕು ಎಂದು ಅವರು ಹೇಳಿದರು.