Publish Date: Sat, 14 Jul 2018 (17:28 IST)
Updated Date: Sat, 14 Jul 2018 (17:32 IST)
ಆ ಮಗು ಜನಿಸಿದ ಕೆಲವೇ ಘಂಟೆಗಳಲ್ಲಿ ಕಳ್ಳತನವಾಗಿತ್ತು. ತಡರಾತ್ರಿ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಶಿಶು ಕಳ್ಳತನಮಾಡಲಾಗಿತ್ತು. ಇದೀಗ ಕಳುವಾಗಿದ್ದ ಮಗು ಪತ್ತೆಯಾಗಿದ್ದು, ಪಾಲಕರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕಳವಾಗಿದ್ದ ಮಗು ಅತ್ತಿಬೆಲೆಯಲ್ಲಿ ಪತ್ತೆ ಆಗಿದೆ. ಕೋಲಾರ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯಲ್ಲಿ ಜು.11 ರಂದು ಹೆಣ್ಣು ಶಿಶು ಕಳುವಾಗಿತ್ತು. ಬೆಳಗಿನ ಜಾವ 3 ಗಂಟೆ ವೇಳೆ ಕಳವಾಗಿದ್ದ ಹೆಣ್ಣು ಶಿಶು ಈಗ ಪತ್ತೆಯಾಗಿದೆ.
ಕೋಲಾರದ ಮುಳಬಾಗಿಲು ತಾಲೂಕಿನ ವಮ್ಮಸಂದ್ರದ ನಾರಾಯಣಸ್ವಾಮಿ ಹಾಗೂ ವೇಣುಕುಮಾರಿ ಅವ್ರ ಹೆಣ್ಣು ಶಿಶು ನಾಪತ್ತೆಯಾಗಿತ್ತು. ಬೆಂಗಳೂರಿನ ಅತ್ತಿಬೆಲೆ- ಸರ್ಜಾಪುರ ಮಾರ್ಗದ ಕೆ ಎಚ್ ಬಿ ಕಾಲೋನಿ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಪತ್ತೆಯಾಗಿದೆ. ಮಗು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಂದ ಮಗು ರಕ್ಷಿಸಿ ಬಾಲಮಂದಿರಕ್ಕೆ ಹಸ್ತಾಂತರ ಮಾಡಲಾಗಿದೆ.
ಕೊನೆಗೂ ಶಿಶು ಅಮ್ಮನ ಮಡಿಲಿಗೆ ಸೇರಿದೆ. ಮಗು ಕಳವು ಮಾಡಿದ ಆರೋಪಿಗಳು ಯಾರೆಂದು ಈವರೆಗೂ ಮಾಹಿತಿ ಸಿಕ್ಕಿಲ್ಲ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.