ಬೆಂಗಳೂರು: ಅಬಕಾರಿ ಸಚಿವ ತಿಮ್ಮಾಪುರ ಮದ್ಯದಂಗಡಿಗಳಿಂದ ವಾರಕ್ಕೆ 18 ಕೋಟಿ ರೂ. ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕದ ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ ಹಫ್ತಾ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ಆರ್ ಅಶೋಕ್ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರೌಡಿಗಳಂತೆ ಇದೀಗ ಇಲಾಖೆಯ ಅಧಿಕಾರಿಗಳೇ ಹಫ್ತಾ ದಂಧೆಗಿಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ 11 ಸಾವಿರ ಮದ್ಯದಂಗಡಿಗಳಿವೆ. ಇವುಗಳಿಂದ ತಲಾ 20 ಸಾವಿರ ರೂ.ಗಳಂತೆ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಮದ್ಯದಂಗಡಿಗಳ ಮಾಲಿಕರೇ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಉಪ ಚುನಾವಣೆ ಹೊಸ್ತಿಲಲ್ಲಿ ಇದು ಕಾಂಗ್ರೆಸ್ ಗೆ ಮತ್ತೊಂದು ಕಂಟಕವಾಗಲಿದೆ.
ನಮ್ಮ ವಿರುದ್ಧ ಈ ಹಿಂದೆ ಪೇಸಿಎಂ ಪೋಸ್ಟರ್ ಅಂಟಿಸಿದ್ದಿರಿ. ಆಗ ನಮಗೆ ನಿಮ್ಮನ್ನು ಸನ್ಮಾನ ಮಾಡಲು ಸಾಧ್ಯವಾಗಲಿಲ್ಲ. ಈಗ ನಾವೂ ಪೇಸಿಎಂ ಪೋಸ್ಟರ್ ಅಂಟಿಸಿ ನಿಮ್ಮನ್ನು ಸನ್ಮಾನ ಮಾಡುತ್ತೇವೆ ಎಂದು ಅಶೋಕ್ ವ್ಯಂಗ್ಯ ಮಾಡಿದ್ದಾರೆ. ಎಲ್ಲಾ ಇಲಾಖೆಯಲ್ಲಿ ಲೂಟಿ, ಭ್ರಷ್ಟಾಚಾರ ನಡೆಯುತ್ತಿದೆ. ಅದೇ ಈ ಸರ್ಕಾರದ ಸಾಧನೆ ಎಂದು ಅವರು ಟೀಕಿಸಿದ್ದಾರೆ.