ನೆಲಮಂಗಲ: ಕಾರು ಓವರ್‌ಟೇಕ್ ವಿಚಾರವಾಗಿ ದಾಖಲಾದ ಪ್ರಕರಣ ಸಂಬಂಧ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಇಂದು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಗೆ ಹಾಜರಾಗಿ ಮಾಹಿತಿಯನ್ನು ನೀಡಿದ್ದಾರೆ.
ಇತ್ತೀಚೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವ ವೇಳೆ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆಯ ಹಳೇ ನಿಜಗಲ್ ಬಳಿ ಕಾರು ಓವರ್‌ಟೇಕ್ ವಿಚಾರದಲ್ಲಿ ಅನಂತ್ ಕುಮಾರ್ ಹೆಗಡೆ ಕಾರು ಚಾಲಕ ಹಾಗೂ ಮತ್ತೊಂದು ಕಾರಿನವರ ಜೊತೆಗೆ ಗಲಾಟೆ ನಡೆದು ಈ ವಿಚಾರದಲ್ಲಿ ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರೋಡ್ ರೇಜ್ ಪ್ರಕರಣದಲ್ಲಿ ಅನಂತ್ ಕುಮಾರ್ ಹೆಗಡೆ ಕಾರು ಚಾಲಕ ಹಾಗೂ ಗನ್‌ಮ್ಯಾನ್‌ಗೆ ನೆಲಮಂಗಲ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಬಳಿಕ, ಡಾಬಸ್‌ಪೇಟೆ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ಮಾಜಿ ಸಂಸದರಿಗೆ ನೋಟಿಸ್ ನೀಡಿದ್ದರು.
ಈ ವಿಚಾರದಲ್ಲಿ ಡಾಬಸ್‌ಪೇಟೆಗೆ ಹಾಜರಾಗಬೇಕಿದ್ದ ಅನಂತ್ ಕುಮಾರ್ ಹೆಗಡೆ ಭದ್ರತೆ ಒದಗಿಸುವ ದೃಷ್ಟಿಯಿಂದ ಡಾಬಸ್‌ಪೇಟೆ ಪೊಲೀಸರು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ. ಸತತ ಒಂದು ಗಂಟೆಗಳ ಕಾಲ ವಿಚಾರಣೆ ಮುಗಿಸಿ ತೆರಳಿದ ಅವರನ್ನು ಡಾಬಸ್‌ಪೇಟೆ ಇನ್ಸ್ಪೆಕ್ಟರ್ ರಾಜು ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಒಳಪಡಿಸಿದರು.