ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡ ಆರೋಪದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ನಾಗೇಂದ್ರ ಯಾವುದೇ ಮಾಹಿತಿ ಬಿಟ್ಟುಕೊಡದೇ ಅಧಿಕಾರಿಗಳನ್ನು ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.
ತಮ್ಮ ಆಪ್ತರ ಮೂಲಕ ನಾಗೇಂದ್ರ ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು ಆರು ದಿನಗಳ ಕಾಲ ಅವರನ್ನು ಇಡಿ ವಶಕ್ಕೊಪ್ಪಿಸಿತ್ತು.
ಈ ಸಮದಯಲ್ಲಿ ಇಡಿ ಹಗರಣದ ಬಗ್ಗೆ ಅವರಿಂದ ಇಂಚಿಂಚೂ ಮಾಹಿತಿ ಪಡೆಯಲು ಮುಂದಾಗಿದೆ. ಆದರೆ ಏನೇ ಪ್ರಶ್ನೆ ಕೇಳಿದರೂ ನನಗೆ ಗೊತ್ತಿಲ್ಲ ಎಂದೇ ನಾಗೇಂದ್ರ ಹೇಳುತ್ತಿದ್ದು ಅಧಿಕಾರಿಗಳಿಗೆ ತಲೆನೋವಾಗಿದೆ. ವಿಚಾರಣೆ ವೇಳೆ ಏನೇ ಪ್ರಶ್ನೆ ಕೇಳಿದರೂ ನನಗೇನೂ ಗೊತ್ತಿಲ್ಲ, ನನಗೆ ಮಾಹಿತಿಯಿಲ್ಲ ಎಂದಷ್ಟೇ ಹೇಳುತ್ತಿದ್ದಾರೆ.
ಆದರೆ ಅವರ ಆಪ್ತ ಹರೀಶ್ ಮಾಜಿ ಸಚಿವರ ಪಾತ್ರದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅಲ್ಲದೆ, ವಿಚಾರಣೆಗೆ ಅನಾರೋಗ್ಯದ ಕುಂಟು ನೆಪ ಹೇಳುತ್ತಿದ್ದಾರೆ. ಹೀಗಾಗಿ ನಿನ್ನೆ ಇಡಿ ಕಚೇರಿಗೇ ಆಗಮಿಸಿದ ಬೌರಿಂಗ್ ಆಸ್ಪತ್ರೆಯ ವೈದ್ಯರು ಅವರ ಆರೋಗ್ಯ ತಪಾಸಣೆಯನ್ನೂ ನಡೆಸಸಿದ್ದಾರೆ.