Select Your Language

Notifications

webdunia
webdunia
webdunia
webdunia

ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ನೀಡಿದ ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಶನಿವಾರ, 13 ಜುಲೈ 2024 (14:32 IST)
ಬೆಂಗಳೂರು: ಯಾವುದೇ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬೇಡಿ. ನಿಮ್ಮ ಎಲ್ಲಾ ಅಹವಾಲುಗಳನ್ನು ಸ್ವೀಕರಿಸಿ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆದಿದ್ದ ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರಿಗೆ ಭರವಸೆ ನೀಡಿದರು.
 
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಶನಿವಾರ ನಡೆದ "ಕಾರ್ಯಕರ್ತರೊಂದಿಗೆ ನಿಮ್ಮ ಸಿಎಂ" (ಅಹವಾಲು ಸ್ವೀಕಾರ) ಕಾರ್ಯಕ್ರಮದಲ್ಲಿ ಮಾತನಾಡಿದರು.
 
ವಿಕಲಚೇತನರ ಬಳಿಗೆ ಹೋಗಿ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿಗಳು "ಕಾರ್ಯಕರ್ತರ ಎಲ್ಲಾ ಅಹವಾಲುಗಳನ್ನು ವಿಂಗಡಿಸಿ ನನಗೆ ನೀಡಬೇಕು" ಎಂದು ಅಧಿಕಾರಿಗಳಿಗೆ ತಿಳಿಸಿದರು.
 
ಕಾಂಗ್ರೆಸ್ ಕಚೇರಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರರಿಗೆ ಮನೆ ಭಾಗ್ಯ
 
ನಾವು ಕಾಂಗ್ರೆಸ್ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಇದ್ದೇವೆ ನಮಗೆ ಮನೆ ಕೊಡಿ ಎಂದು ಜಯಂತಿ, ಅರ್ಚನಾ, ಸುಗಂಧಿ, ಆಶಾ, ಸಂಧ್ಯಾ ಅವರು ಮನವಿ ಸಲ್ಲಿಸಿದಾಗ "ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಾ ಇದ್ದೀರಾ. ನಿಮಗೆ ರಾಜೀವ್ ಗಾಂಧಿ ವಸತಿ ನಿಗಮದ ಅಡಿ ಮನೆ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಶೇ.90 ರಷ್ಟು ನಿಗಮ ಮಂಡಳಿಯ ಅಧ್ಯಕ್ಷರನ್ನು ನೇಮಕಾತಿ ಮಾಡಲಾಗಿದೆ. ಸುಮಾರು 10-15 ಮಂಡಳಿಗಳಿಗೆ ನಾನು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಅವರು ಸೇರಿ ಚರ್ಚೆ ನಡೆಸಿ ನೇಮಕಾತಿ ಮಾಡುತ್ತೇವೆ. ಈಗಾಗಲೇ ಜಿಲ್ಲಾ, ತಾಲ್ಲೂಕು  ಗ್ಯಾರಂಟಿ ಸಮಿತಿಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಒಂದಷ್ಟು ಮಂಡಳಿಗಳಲ್ಲಿ ನಿರ್ದೇಶಕ ಸ್ಥಾನಕ್ಕೆ ಅವಕಾಶ ಮಾಡಿಕೊಡಲಾಗಿದೆ" ಎಂದು ಹೇಳಿದರು.
 
ತ್ರಿಚಕ್ರ ವಾಹನ, ಸರ್ಕಾರಿ ಉದ್ಯೋಗ,ನಿಗಮ ಮಂಡಳಿಯಲ್ಲಿ ಅವಕಾಶ, ಗುತ್ತಿಗೆ ನೌಕರಿ, ಸ್ವಂತ ಉದ್ಯೋಗಕ್ಕೆ ಅನುದಾನ, ಸಾಲ ಸವಲತ್ತು ಸೇರಿ ನಾನಾ ಬೇಡಿಕೆಗಳನ್ನು ವಿಕಲಚೇತನ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಗಳ ಮುಂದಿಟ್ಟರು. 
 
ನಾನು ಪಕ್ಷಕ್ಕೆ ದುಡಿಯುತ್ತಿದ್ದು, ಒಂದು ಮನೆ ಮಂಜೂರು ಮಾಡಿಕೊಡಿ ಎಂದು ಯಾದಗಿರಿ ಜಿಲ್ಲೆಯ ರಾಮಸಮುದ್ರದ ಚಂದಪಾಷ ಅವರ ಮನವಿಗೆ ಸ್ಪಂದಿಸಿದ ಸಿಎಂ ಅವರು "ನಿಮ್ಮ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಹೇಳುವೆ ಹಾಗೂ ಸಿಎಂ ಪರಿಹಾರ ನಿಧಿ ಮೂಲಕ ನೀಡುತ್ತೇನೆ" ಎಂದು ಭರವಸೆ ನೀಡಿದರು.
 
ಕೆಎಂಎಫ್ ಸೇರಿದ ವೆಬ್ ಸೈಟ್ ಅಲ್ಲಿನ ಮಾಹಿತಿಯು ಕನ್ನಡ ಹೊರತಾಗಿ ಇಂಗ್ಲಿಷ್, ಗುಜರಾತಿ, ಮರಾಠಿ, ಹಿಂದಿ ಭಾಷೆಯಲ್ಲಿ ಮಾಹಿತಿಯಿದ್ದು ಕನ್ನಡ ಮಾಯವಾಗಿದೆ ಎಂದು ಚಾಮರಾಜನಗರದ ಎಸ್. ಶಿವನಾಗಪ್ಪ ಅವರು ಮನವಿ ಸಲ್ಲಿಸಿದಾಗ ಕೆಎಂಎಫ್ ಅಧಿಕಾರಿಗೆ ಕರೆ ಮಾಡಿ "ಕನ್ನಡದಲ್ಲಿ ಮಾಹಿತಿಯನ್ನು ಏಕೆ ಕೊಟ್ಟಿಲ್ಲ, ಕೂಡಲೇ ಕನ್ನಡದಲ್ಲಿ ಮಾಹಿತಿ ದೊರೆಯುವಂತೆ ಮಾಡಿ" ಎಂದು ಸೂಚನೆ ನೀಡಿದರು.
 
ರಾಜ್ಯಸಭಾ ಸಂಸದರಾದ ಜಿ. ಸಿ. ಚಂದ್ರಶೇಖರ್, ಶಾಸಕರಾದ ತನ್ವೀರ್ ಸೇಟ್ ಅವರು ಅಹವಾಲು ಸಲ್ಲಿಕೆ  ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ನಾಗೇಂದ್ರ ವಿರುದ್ಧ ಎಸ್ಐಟಿ ತನಿಖೆ ಸಾಕಿತ್ತು, ಇಡಿ ಯಾಕೆ ಬೇಕಿತ್ತು: ಗೃಹಸಚಿವ ಪರಮೇಶ್ವರ್