Select Your Language

Notifications

webdunia
webdunia
webdunia
webdunia

ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಲಿ: ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಮಂಗಳವಾರ, 12 ಆಗಸ್ಟ್ 2025 (16:59 IST)
ಬೆಂಗಳೂರು: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ನಿಲುವು ಬಿಜೆಪಿಯದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
 
ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲಿನಲ್ಲಿ ಜಸ್ಟಿಸ್ ನಾಗಮೋಹನ್ ದಾಸ್ ವರದಿಯ ಅನುಷ್ಠಾನದ ಸಂಬಂಧ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು. ದೀನದಯಾಳ್ ಉಪಾಧ್ಯಾಯರ ಅಂತ್ಯೋದಯದ ಚಿಂತನೆಯೂ ಇದೇ ಆಗಿದೆ ಎಂದು ಅವರು ನುಡಿದರು.

ಆರ್ಥಿಕ- ಸಾಮಾಜಿಕ- ಶೈಕ್ಷಣಿಕವಾಗಿ ಶಕ್ತಿ ಸಿಗಬೇಕು. ನಮ್ಮ ಸಮಾಜದ ಮಕ್ಕಳಿಗೂ ನ್ಯಾಯ ಲಭಿಸಿ ಸಮಾಜದ ಮುಂಚೂಣಿಯಲ್ಲಿ ಬರಬೇಕೆಂದು ಇಚ್ಛಾಶಕ್ತಿ ಇಟ್ಟುಕೊಂಡು ಕಳೆದ 30 ವರ್ಷಗಳಿಂದ ಸತತ ಹೋರಾಟ ಮಾಡುತ್ತ ಈ ಸಮುದಾಯ ಬಂದಿದೆ. ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಅವರು ಈ ಹೋರಾಟಕ್ಕೆ ಸರಿಯಾದ ದಿಕ್ಕು ಸೂಚಿಸಿದ್ದಾರೆ ಎಂದು ತಿಳಿಸಿದರು.

ಸದಾಶಿವ ಆಯೋಗದ ಕಾರ್ಯನಿರ್ವಹಣೆಗೆ ಕಾಂಗ್ರೆಸ್ ಸರಕಾರ ಹಣ ಕೊಟ್ಟಿರಲಿಲ್ಲ. ಅಗತ್ಯ ಮೊತ್ತವನ್ನು ನೀಡಿದ ಬಿ.ಎಸ್.ಯಡಿಯೂರಪ್ಪ ಅವರು, ಆಯೋಗ ಸರಿಯಾದ ನಿಟ್ಟಿನಲ್ಲಿ ಸಾಗಲು ಕಾರಣರಾದರು. ಹಿಂದಿನ ಬಿಜೆಪಿ ಸರಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಳಜಿ ಇಟ್ಟುಕೊಂಡು ಈ ಸಮಾಜಕ್ಕೆ ನ್ಯಾಯ ನೀಡಲು ದಿಟ್ಟ ನಿರ್ಧಾರ ಮಾಡಿದ್ದಾರೆ ಎಂದು ವಿವರಿಸಿದರು.

ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ, ಸರಕಾರವು ಜಸ್ಟಿಸ್ ನಾಗಮೋಹನ್ ದಾಸ್ ವರದಿಯನ್ನಾದರೂ ಜಾರಿ ಮಾಡಲಿ ಅಥವಾ ಮಾಧುಸ್ವಾಮಿ ವರದಿಯನ್ನಾದರೂ ಅನುಷ್ಠಾನಕ್ಕೆ ತರಬೇಕು. ಆದರೆ, ಕೂಡಲೇ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಕುಂಟುನೆಪ ಒಡ್ಡಿ ಕಾಲಹರಣ ಮಾಡಿದರೆ ರಸ್ತೆ ಮೇಲೆ ಓಡಾಡಲು ಬಿಡುವುದಿಲ್ಲ ಎಂದು ಸರಕಾರಕ್ಕೆ ಎಚ್ಚರಿಸಿದರು. ಮಾತಿಗೆ ತಪ್ಪಿದರೆ ನೀವು ರಸ್ತೆ ಮೇಲೆ ಓಡಾಡುವುದು ಕಠಿಣ ಆಗಲಿದೆ. ವಿಧಾನಸೌಧದಲ್ಲಿ ಕುಳಿತು ಆಡಳಿತ ಮಾಡುವುದೂ ಕಠಿಣವಾದೀತು ಎಂದು ತಿಳಿಸಿದರು.

ಚುನಾವಣೆ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು ಎಂದು ಟೀಕಿಸಿದರು. ಒಳ ಮೀಸಲಾತಿ ವಿಷಯದಲ್ಲಿ ಕೇಂದ್ರ ಸರಕಾರ ಕಳೆದ ಸಾಲಿನಲ್ಲಿ ನ್ಯಾಯ ಕೊಡಿಸುವ ಕೆಲಸ ಮಾಡಿದೆ ಎಂದು ಹೇಳಿದರು. ಆಂಧ್ರ, ತೆಲಂಗಾಣ, ತಮಿಳುನಾಡು, ಪಂಜಾಬ್ ಮೊದಲಾದ ಕಡೆ ಇದು ಜಾರಿ ಆಗಿದೆ. ಆದರೆ, ಕರ್ನಾಟಕ ಸರಕಾರ ಜಾರಿಗೊಳಿಸಲಿಲ್ಲ ಎಂದು ಟೀಕಿಸಿದರು.

ಅಧಿಕಾರಕ್ಕೆ ಬಂದ ಮೊದಲನೇ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕೊಡುತ್ತೇವೆಂದು 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ನುಡಿದಂತೆ ನಡೆಯದೆ ಮೋಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಜಸ್ಟಿಸ್ ನಾಗಮೋಹನ್ ದಾಸ್ ಆಯೋಗ ರಚಿಸಿ ಕಾಲಹರಣ ಮಾಡಿದ್ದಾಗಿ ದೂರಿದರು.
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಸೀತೆಯಿಂದ ದೂರವಾದ ನಂತರ ಶ್ರೀರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ತಮಿಳು ಕವಿ ಹೇಳಿಕೆಗೆ ಬಿಜೆಪಿ ಆಕ್ರೋಶ