ಬೆಂಗಳೂರು: ನಿನ್ನೆ ಬೆಂಗಳೂರಿನಲ್ಲಿ ಮತಗಳ್ಳತನವಾಗಿದೆ ಎಂದು ಬೃಹತ್ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿಕ ಚುನಾವಣಾ ಆಯೋಗಕ್ಕೆ ದೂರು ಕೊಡದೇ ದೆಹಲಿಗೆ ತೆರಳಿದ್ದರು. ಇದಕ್ಕೆ ಬಿಜೆಪಿ ಟಾಂಗ್ ಕೊಟ್ಟಿದ್ದು ದೂರು ಕೊಡದೇ ಓಡಿ ಹೋದ ಹೇಡಿ ಎಂದು ವ್ಯಂಗ್ಯ ಮಾಡಿದೆ.
ಫ್ರೀಡಂ ಪಾರ್ಕ್ ನಲ್ಲಿ ನಿನ್ನೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಈ ವೇಳೆ ರಾಹುಲ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆ ವೇಳೆ ನಕಲಿ ಮತದಾರರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಅದರಿಂದಲೇ ನಮಗೆ ಸೋಲಾಗಿದೆ. ಮೋದಿ ಕಳ್ಳಾಟದಿಂದ ಪ್ರಧಾನಿಯಾಗಿದ್ದಾರೆ ಎಂದು ರಾಹುಲ್ ಸೇರಿದಂತೆ ಎಲ್ಲಾ ನಾಯಕರೂ ಆರೋಪಿಸಿದ್ದರು. ಸಮಾವೇಶದ ಬಳಿಕ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ಕೊಡಬೇಕಿತ್ತು.
ಆದರೆ ದೂರು ಕೊಡುವಾಗ ರಾಹುಲ್ ಇರಲಿಲ್ಲ. ಅಷ್ಟರಲ್ಲಾಗಲೇ ಅವರು ದೆಹಲಿ ವಿಮಾನ ಏರಿಯಾಗಿತ್ತು. ಕೇವಲ ಡಿಕೆ ಶಿವಕುಮಾರ್ ಮತ್ತು ಸಂಗಡಿಗರು ಮಾತ್ರ ಚುನಾವಣಾ ಆಯೋಗದ ಕಚೇರಿಗೆ ತೆರಳಿ ದೂರು ನೀಡಿದರು. ಇದರ ಬಗ್ಗೆ ಬಿಜೆಪಿ ತೀವ್ರ ಟೀಕೆ ನಡೆಸಿದೆ.
ಲೋಕಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಮತಗಳ್ಳತನವಾಗಿದೆ ಎಂದು ಸುಳ್ಳು ಆರೋಪ ಮಾಡಿ, ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಬಳಿಕ ಯಾವುದೇ ದೂರು ದಾಖಲಿಸದೆ ಹೇಡಿಯಂತೆ ಪಲಾಯನಗೈದ ಉತ್ತರಕುಮಾರ ರಾಹುಲ್ ಗಾಂಧಿ ಎಂದು ಬಿಜೆಪಿ ಟೀಕೆ ಮಾಡಿದೆ.