Select Your Language

Notifications

webdunia
webdunia
webdunia
webdunia

ಸರ್ಕಾರ ಬೀಳಿಸಲ್ಲ ಅಂತ ನಾವೇ ಹೇಳಿದ್ರೂ ಕಾಂಗ್ರೆಸ್ ಗೆ ನಂಬಿಕೆಯಿಲ್ಲ: ಆರ್ ಅಶೋಕ್

R Ashok

Sampriya

ಬೆಂಗಳೂರು , ಶನಿವಾರ, 31 ಆಗಸ್ಟ್ 2024 (19:27 IST)
ಬೆಂಗಳೂರು: ನಾವು ಸರಕಾರ ಬೀಳಿಸುವುದಿಲ್ಲ; ಬೀಳಿಸುವುದಿಲ್ಲ ಎಂದು ಪದೇಪದೇ ಹೇಳಿದರೂ ಕೂಡ ಸರಕಾರ ಬಿದ್ದು ಹೋಗುತ್ತದೆ ಎಂದು ಹೇಳಿಕೆ ಕೊಡುವ ಮೂಲಕ ಕಾಂಗ್ರೆಸ್ಸಿಗರು ತಮ್ಮ ಸರಕಾರವನ್ನೇ ದುರ್ಬಲಗೊಳಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಜೊತೆ ಮಾತನಾಡಿದ ಅವರು, ತಮ್ಮ ಪಕ್ಷದ 136 ಶಾಸಕರ ಮೇಲೆ ನಂಬಿಕೆ ಕಳಕೊಂಡ ಮುಖ್ಯಮಂತ್ರಿ ಇವರು ಎಂದು ಟೀಕಿಸಿದರು. ಶಾಸಕರ ಮೇಲೆ ನಂಬಿಕೆ ಇದ್ದರೆ ಮುಖ್ಯಮಂತ್ರಿ ಹೀಗ್ಯಾಕೆ ಪದೇಪದೇ ಹೇಳುತ್ತಾರೆ ಎಂದು ಸವಾಲು ಹಾಕಿದರು.

ಬಂಡೆ ನಾನು; ಬಂಡೆ ಥರ ಸಿದ್ದರಾಮಯ್ಯ ಪರ ಇರುವುದಾಗಿ ಹೇಳಿದರೆ ನಮ್ಮ ಕೈಲಿ ಬಂಡೆ ತಳ್ಳುವ ಶಕ್ತಿ ಇದೆಯೇ ಎಂದು ಪ್ರಶ್ನಿಸಿದರು. ನಮಗೆ ಆ ಶಕ್ತಿಯೇ ಇಲ್ಲ ಎಂದರಲ್ಲದೆ, 136 ಜನ ಶಾಸಕರು ಇರುವುದಾಗಿ ಅಹಂಕಾರದಿಂದ ಕಾಂಗ್ರೆಸ್ಸಿಗರು ಮೆರೆಯುತ್ತಿದ್ದರು. ಈಗ ಸರಕಾರ ಬೀಳಿಸುವುದಾಗಿ ಆರೋಪಿಸುತ್ತೀರಲ್ಲವೇ ಎಂದು ಕೇಳಿದರು.

ಗೌರವಾನ್ವಿತ ರಾಜ್ಯಪಾಲರು ಕಾನೂನಿನ ಸಲಹೆ ಪಡೆದೇ, ಸತ್ಯಾಸತ್ಯತೆ ಪರಿಶೀಲಿಸಿ ತನಿಖೆಗೆ ಅನುಮತಿ ಕೊಟ್ಟಿರುತ್ತಾರೆ. ಕರ್ನಾಟಕದ 70 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಅನುಮತಿ ನೀಡಿದಂತೆ ಕಾಂಗ್ರೆಸ್ಸಿಗರು ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

 ಹಿಂದೆ ಯಡಿಯೂರಪ್ಪ ಅವರು ಸೇರಿ ಅನೇಕರ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿದ್ದಾರಲ್ಲವೇ? ಆಗ ಯಾರ ಸರಕಾರ ಕೇಂದ್ರದಲ್ಲಿ ಆಳ್ವಿಕೆಯಲ್ಲಿತ್ತು? ಆಗ ರಾಜಭವನವನ್ನು ಇವರು ಕಾಂಗ್ರೆಸ್ ಕಚೇರಿ ಮಾಡಿಕೊಂಡಿದ್ದರೇ ಎಂದು ಕೇಳಿದರು. ಆಗ ಇವರು ಸತ್ಯಹರಿಶ್ಚಂದ್ರರ ಮೊಮ್ಮಕ್ಕಳು. ಈಗ ಈ ರೀತಿ ಹೇಳಿದರೆ ಯಾರಾದರೂ ನಂಬುತ್ತಾರಾ ಎಂದು ಕೇಳಿದರು. ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡು ಕಾಂಗ್ರೆಸ್ಸಿನ ಕೆಲಸಗಳಿಗೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಅದು ರಾಜ್ಯದ 7 ಕೋಟಿ ಜನರ ಆಸ್ತಿ ಎಂದು ವಿಶ್ಲೇಷಿಸಿದರು.

ವಿಧಾನಸೌಧವನ್ನು ತಾವು ಕಾಂಗ್ರೆಸ್ ಕಚೇರಿ ಮಾಡಿಕೊಂಡಿದ್ದಾಗಿ ಒಪ್ಪಿಕೊಳ್ಳಲಿ; ಆಗ ರಾಜಭವನವು ಬಿಜೆಪಿ ಕಚೇರಿಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ರಾಜಭವನವೂ ಒಂದು ಸಂವಿಧಾನದತ್ತ ಸಂಸ್ಥೆಯಾಗಿದೆ; ಹೇಗೆ ವಿಧಾನಸೌಧ ಇದೆಯೋ ಅದು ಕೂಡ ಒಂದು ಸಂವಿಧಾನದತ್ತ ಸಂಸ್ಥೆ. ಮುಖ್ಯಮಂತ್ರಿಯವರು ರಾಗ, ದ್ವೇಷ ಇಲ್ಲದೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ಸಿಗರಾದ ನೀವು ರಾಜಭವನವನ್ನು ಬಿಜೆಪಿ ಕಚೇರಿ ಎಂದು ಕರೆದರೆ ನಾವು ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಎಂದು ಕರೆಯುತ್ತೇವೆ ಎಂದು ಎಚ್ಚರಿಸಿದರು.

ಕಿವಿ ಮೇಲೆ ಹೂ ಇಡಬೇಡಿ; ಹೂ ಇಡುವುದನ್ನು ಬಿಟ್ಟು ಮಾನ್ಯ ರಾಜ್ಯಪಾಲರ ಅನುಮತಿ ಬಗ್ಗೆ ಕೋರ್ಟಿನಲ್ಲಿ ಪ್ರಶ್ನಿಸಿ ಎಂದು ಅವರು ಸವಾಲೆಸೆದರು.

ಡಿ.ಕೆ.ಶಿವಕುಮಾರ್ ವಿಚಾರ ಕೋರ್ಟಿನಲ್ಲಿತ್ತು. ಮಾಧ್ಯಮದಲ್ಲಿ ಡಿಕೆಶಿಗೆ ರಿಲೀಫ್ ಎಂದು ಬಂತು. ನಾವೇನಾದರೂ ಪ್ರಶ್ನಿಸಿದ್ದೇವಾ ಎಂದು ಕೇಳಿದರು. ಕೋರ್ಟಿನಲ್ಲಿ ಹೋರಾಟ ನಡೆಯುವಾಗ ಕಾಂಗ್ರೆಸ್ಸಿಗರು ಪ್ರತಿಭಟನೆ- ಹೋರಾಟ ಮಾಡಿದ್ದಾರೆ.É ಕಾಂಗ್ರೆಸ್ ಪಕ್ಷವು ತನ್ನ ಹಗರಣಗಳನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿದೆ ಎಂದು ಆಕ್ಷೇಪಿಸಿದರು. ರಾಜಭವನದ ಮೇಲೆ ಒತ್ತಡ ಹಾಕುವುದು ಸಂವಿಧಾನದ ಮೇಲಿನ ಅಪಚಾರ ಎಂದು ಅವರು ಟೀಕಿಸಿದರು.

ಟಿಕೆಟ್ ಕೊಡುವುದು ಮತ್ತು ತಪ್ಪಿಸುವುದು ನನ್ನ ಕೈಯಲ್ಲಿ ಇಲ್ಲ. ಟಿಕೆಟ್ ಕೊಡುವುದು ಎನ್‍ಡಿಎ. ಅದು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು, ಅಮಿತ್ ಶಾ ಅವರು, ಎನ್‍ಡಿಎ ಭಾಗೀದಾರ ಪಕ್ಷದ ಕುಮಾರಸ್ವಾಮಿ ಅವರ ಕೈಯಲ್ಲಿದೆ. ನಾವೇನಿದ್ದರೂ ಮನವಿ ಮಾಡುತ್ತೇವೆ. 3 ಕ್ಷೇತ್ರಗಳ ಬಗ್ಗೆ ಅಭಿಪ್ರಾಯ ಹೇಳಿದ್ದೇವೆ. ತೀರ್ಮಾನ ಏನಿದ್ದರೂ ಎನ್‍ಡಿಎ ಮುಖಂಡರು ಮಾಡುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಚನ್ನಪಟ್ಟಣ ಮಾತ್ರವಲ್ಲದೆ ಎಲ್ಲ 3 ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷ ಸೋಲಿಸಲು ಒಟ್ಟಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಜೆಡಿಎಸ್‌ ವಿರುದ್ಧದ ದೂರುಗಳಿಗೆ ರಾಜ್ಯಪಾಲರು ಕಣ್ಮುಚ್ಚಿ ಕುಳಿತಿರುವುದೇಕೆ