ಬೆಂಗಳೂರು : ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ, ಭೂಮಿ ಮೇಲೆ ನರಕದ ಪರಿಚಯ ಮಾಡಿಸಿದ ಮಹಾಮಾರಿ ಕೊರೊನಾ ಸದ್ಯ ತನ್ನ ಆರ್ಭಟ ನಿಲ್ಲಿಸಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಶೂನ್ಯವಾಗುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಭಾನುವಾರ 24 ಗಂಟೆಗಳಲ್ಲಿ ಯಾವುದೇ ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೈನಂದಿನ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದೆ.
ಗುಪ್ತಗಾಮಿನಿಯಂತೆ ಜನರ ದೇಹ ಹೊಕ್ಕಿ ಜೀವ ಹಿಂಡುತ್ತಿದ್ದ ಕೊರೊನಾ ಸದ್ಯ ಕಡಿಮೆಯಾಗಿದೆ. ರಾಜ್ಯದಲ್ಲೀಗ ಕೇವಲ 9 ಸಕ್ರಿಯ ಕೋವಿಡ್-19 ಪ್ರಕರಣಗಳಿವೆ. ದೈನಂದಿನ ಪರೀಕ್ಷಾ ಪಾಸಿಟಿವ್ ದರವು 0% ಆಗಿದ್ದು, ವಾರದ ಕೊರೊನಾ ಪರಿಕ್ಷೆಯ ಪಾಸಿಟಿವ್ ದರವು 0.14% ಇದೆ. ಕಳೆದ 24 ಗಂಟೆಗಳಲ್ಲಿ ನಾಲ್ವರು ಚೇತರಿಸಿಕೊಂಡಿದ್ದಾರೆ. ಈ ತಿಂಗಳ ಜುಲೈ 11 ರಂದು ಕೂಡ ರಾಜ್ಯದಲ್ಲಿ ಶೂನ್ಯ ಕೋವಿಡ್ -19 ಸೋಂಕುಗಳು ವರದಿಯಾಗಿದ್ದವು. ಜೂನ್ನಲ್ಲಿ ದಿನಕ್ಕೆ 1 ರಿಂದ 25 ಸೋಂಕುಗಳು ಕಂಡು ಬರುತ್ತಿದ್ದವು.
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಪ್ರತಿ ದಿನ ಒಂದೊಂದು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಸದ್ಯ ಜುಲೈ 23ರ ಭಾನುವಾರದಿಂದ ಸೋಮವಾರದ ವರೆಗಿನ 24 ಗಂಟೆಗಳ ಅವಧಿಯಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಪ್ರಸ್ತುತ ರಾಜ್ಯದಲ್ಲಿ ಕೇವಲ 9 ಪ್ರಕರಣಗಳು ಮಾತ್ರ ಇದ್ದು ಚಿಕಿತ್ಸೆ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಸೋಂಕಿತರು ಕೂಡ ಡಿಸ್ಚಾರ್ಜ್ ಆಗಲಿದ್ದು ರಾಜ್ಯದಲ್ಲಿ ಕೊರೊನಾ ಹೆಸರು ಅಳಿಸಿಹೋಗಲಿದೆ.