ಬೆಂಗಳೂರು: ಮುಷ್ಕರ, ಲಾಕ್ ಡೌನ್ ಬಳಿಕ ಈಗಷ್ಟೇ ಡ್ಯೂಟಿಗೆ ಹಾಜರಾಗಿರುವ ಬಿಎಂಟಿಸಿ ಡ್ರೈವರ್ ಗಳ ಪಾಲಿಗೆ ಎಲೆಕ್ಟ್ರಿಕ್ ಬಸ್ ಗಳು ಕಂಟಕವಾಗಿದೆ. ಎಲೆಕ್ಟ್ರಿಕ್ ಬಸ್ ಗಳ ಓಡಾಟ ಶುರುವಾದ ಬೆನ್ನಲ್ಲೇ ಬಿಎಂಟಿಸಿ ಡ್ರೈವರ್ ಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ.
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್ ಬಸ್ ಗಳು ನಗರದಲ್ಲಿ ಸಂಚಾರ ನಡೆಸಲಿದೆ. ಆದರೆ ಖಾಸಗಿ ಸಂಸ್ಥೆಯಿಂದ ಗುತ್ತಿಗೆ ಆಧಾರದಲ್ಲಿ ಸಂಚಾರ ನಡೆಸುತ್ತಿರುವ ಬಸ್ ಗಳಿಗೆ ಖಾಸಗಿ ಸಂಸ್ಥೆಯವರೇ ಡ್ರೈವರ್ ನನ್ನು ನೇಮಕ ಮಾಡಿರುವುದರಿಂದ ಬಿಎಂಟಿಸಿ ಚಾಲಕರಿಗೆ ಕೆಲಸ ಇಲ್ಲದಂತಾಗಿದೆ.
NTPC ವಿದ್ಯುತ್ ವ್ಯಾಪಾರ್ ನಿಗಮ ಲಿ.ನಿಂದ ಚಾಲನೆಯಾಗುತ್ತಿರುವ ಎಲೆಕ್ಟ್ರಿಕ್ ಬಸ್ ಗಳಲ್ಲಿ ಕಂಡಕ್ಟರ್ ಮಾತ್ರ ಬಿಎಂಟಿಸಿಯವರಾಗಿದ್ದು ಡ್ರೈವರ್ ಗಳು ಖಾಸಗಿಯವರು. ಹೀಗಾಗಿ ಬಿಎಂಟಿಸಿ ಡ್ರೈವರ್ ಗಳಿಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ ಪ್ರತಿ ಡಿಪೋದಲ್ಲಿನ 80 ಡ್ರೈವರ್ ಗಳನ್ನು ಇತರೆಡೆಗೆ ವರ್ಗಾವಣೆ ಮಾಡಲಾಗುತ್ತಿದೆ.
ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಿರುವ ಬಿಎಂಟಿಸಿ, ಘಟಕ 8, 37 ಮತ್ತು 29ರಲ್ಲಿನ ಚಾಲಕರನ್ನು ಬೇರೆ ಘಟಕಕ್ಕೆ ನಿಯೋಜಿಸುವಂತೆ ಆದೇಶಿಸಲಾಗಿದೆ.
ಸದ್ಯಕ್ಕೆ ಮೂರು ಘಟಕಗಳ ಚಾಲಕರನ್ನು ಮಾತ್ರ ವರ್ಗ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಸ್ ಗಳ ಸಂಖ್ಯೆ ಹೆಚ್ಚಾದಾಗ ಚಾಲಕರನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಇನ್ನು ಕೆಲವೇ ವರ್ಷದಲ್ಲಿ ಬಿಎಂಟಿಸಿ ಇತಿಹಾಸದ ಪುಟ ಸೇರಲಿದ್ದು ಖಾಸಗಿಯವರ ಆಟ ಶುರುವಾಗಲಿದೆ ಎಂದೇ ಹೇಳಲಾಗುತ್ತಿದೆ.