ಬೆಂಗಳೂರು: ರಾಜ್ಯಾದ್ಯಂತ ಸಾಕಷ್ಟು ಮಳೆಯಾಗಿದ್ದರೂ ಮತ್ತೆ ಗ್ರಾಹಕರಿಗೆ ವಿದ್ಯುತ್ ಬೆಲೆ ಏರಿಕೆಯ ಶಾಕ್ ಕೊಡಲು ಎಲ್ಲಾ ವಿದ್ಯುತ್ ನಿಗಮಗಳೂ ಸಿದ್ಧವಾಗಿದೆ. ವಿದ್ಯುತ್ ಖರೀದಿ ಹೊರೆಯನ್ನು ಗ್ರಾಹಕರ ಮೇಲೆ ಹಾಕಲು ಸಿದ್ಧತೆ ನಡೆದಿದೆ.
ಬೆಸ್ಕಾಂ ಸೇರಿದಂತೆ ಎಲ್ಲಾ ವಿದ್ಯುತ್ ನಿಗಮಗಳೂ ಬೆಲೆ ಏರಿಕೆ ಮಾಡಲು ಸಿದ್ಧತೆ ಮಾಡಿಕೊಂಡಿವೆ. ಈ ತಿಂಗಳ ಅಂತ್ಯಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ವರದಿ ಸಲ್ಲಿಸಲಿವೆ. ವರದಿಯಲ್ಲಿರುವ ಅಂಶಗಳನ್ನು ಒಪ್ಪಿಕೊಂಡು ದರ ಏರಿಕೆಗೆ ಒಪ್ಪಿಗೆ ಕೊಟ್ಟರೆ ಶೀಘ್ರದಲ್ಲೇ ವಿದ್ಯುತ್ ದರ ಏರಿಕೆಯಾಗುವುದು ಖಚಿತ.
ಸದ್ಯಕ್ಕೆ ರಾಜ್ಯದ ಎಲ್ಲಾ ಜಲಾಶಯಗಳೂ ಭರ್ತಿಯಾಗಿವೆ. ವಿದ್ಯುತ್ ಉತ್ಪಾದನೆಗೆ ಜೂನ್ ವರೆಗೂ ತೊಂದರೆಯಿಲ್ಲ. ಹಾಗಿದ್ದರೂ ಬೇಸಿಗೆಯಲ್ಲಿ ಸಹಜವಾಗಿಯೇ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಆಗ ವಿದ್ಯುತ್ ಖರೀದಿ ಮಾಡುವುದು ಅನಿವಾರ್ಯವಾಗುತ್ತದೆ. ಈ ಖರೀದಿ ವೆಚ್ಚವನ್ನು ಗ್ರಾಹಕರ ಹೆಗಲಿಗೇರಿಸಲು ನಿಗಮಗಳು ಯೋಜನೆ ರೂಪಿಸಿವೆ.
ರಾಜ್ಯದಲ್ಲಿ ಇರುವ ಬೇಡಿಕೆ ಗಮನಿಸಿದರೆ ಕೇವಲ ಜಲ ವಿದ್ಯುತ್ ಉತ್ಪನ್ನವೊಂದೇ ಸಾಲುವುದಿಲ್ಲ. ಆಗ ಶಾಖ ವಿದ್ಯುತ್ ಉತ್ಪಾದನೆಯತ್ತ ಗಮನಹರಿಸಬೇಕಾಗುತ್ತದ.ೆ ಇವುಗಳ ದರ ಪ್ರತಿ ಯೂನಿಟ್ ಗೆ 7.88 ರಷ್ಟಿದೆ. ಶಾಖ ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಹೊರರಾಜ್ಯದಿಂದ ತರಿಸಬೇಕಾಗುತ್ತದೆ. ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಹೆಗಲಿಗೆ ವರ್ಗಾಯಿಸಲು ಚಿಂತನೆ ನಡೆದಿದೆ.