Select Your Language

Notifications

webdunia
webdunia
webdunia
webdunia

ಕೇಂದ್ರ ಸಚಿವ ಡಿವಿಎಸ್ ವಿರುದ್ಧ ಮಾನಹಾನಿ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ ಕೋರ್ಟ್

ಕೇಂದ್ರ ಸಚಿವ ಡಿವಿಎಸ್ ವಿರುದ್ಧ ಮಾನಹಾನಿ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ ಕೋರ್ಟ್
bangalore , ಶನಿವಾರ, 3 ಜುಲೈ 2021 (14:20 IST)
ಬೆಂಗಳೂರು : ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ನಗರದ ನ್ಯಾಯಾಲಯ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
ಈ ಕುರಿತು ಬೆಂಗಳೂರಿನ 14ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಮಲ್ಲಿಕಾರ್ಜುನ ಆದೇಶ ಹೊರಡಿಸಿದ್ದು, ಅರ್ಜಿದಾರರಾದ ಡಿ.ವಿ ಸದಾನಂದಗೌಡ ಅವರ ವಿರುದ್ಧ ಮಾಧ್ಯಮಗಳು ಯಾವುದೇ ಮಾನಹಾನಿಕಾರಕ ವರದಿ ಪ್ರಸಾರ ಮಾಡಬಾರದು ಎಂದು ನಿರ್ಬಂಧ ವಿಧಿಸಿದ್ದಾರೆ.
ಡಿವಿ ಸದಾನಂದಗೌಡ ಸಲ್ಲಿಸಿರುವ ಅರ್ಜಿಯಲ್ಲಿ, ತಾವು ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಕೇಂದ್ರ ಸಚಿವನಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಾಧ್ಯಮಗಳು ತನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಸಾಧ್ಯತೆ ಇದೆ. ಕಿಡಿಗೇಡಿಗಳು ನಕಲಿ ಸಿಡಿ ಸೃಷ್ಟಿಸಿ ಅದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಿಸುವ ಸಾಧ್ಯತೆ ಇದೆ. ಅಂತಹ ವಿಡಿಯೋ ಪ್ರಸಾರವಾದಲ್ಲಿ ತಮ್ಮ ಘನತೆ, ಗೌರವ ಹಾಗೂ ಚಾರಿತ್ರ್ಯಕ್ಕೆ ಹಾನಿಯಾಗಲಿದೆ. ಹೀಗಾಗಿ ಮಾಧ್ಯಮಗಳು ಆಧಾರ ರಹಿತ ಸುಳ್ಳು ಸುದ್ದಿಗಳನ್ನು ಹಾಗೂ ಮಾನಹಾನಿಕರ ವರದಿ ಬಿತ್ತರಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಆದೇಶಿಸಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಳಿಕ ರಾಜ್ಯ ಸರ್ಕಾರದ 6 ಮಂದಿ ಸಚಿವರು ಇದೇ ರೀತಿ ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನಿರ್ಬಂಧಕಾಜ್ಞೆ ಪಡೆದುಕೊಂಡಿದ್ದರು. ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ.ಸಿ ಪಾಟೀಲ್, ಆರೋಗ್ಯ ಸಚಿವ ಡಿ. ಕೆ ಸುಧಾಕರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಕೋರಿಕೆ ಪರಿಗಣಿಸಿ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು.
webdunia

Share this Story:

Follow Webdunia kannada

ಮುಂದಿನ ಸುದ್ದಿ

ಪೇಟಿಯಂ ಗ್ರಾಹಕರಿಗೆ ಗುಡ್‍ನ್ಯೂಸ್