ಮಡಿಕೇರಿ ತಾಲೂಕಿನ ಪೆರಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ 1.25 ಕೋಟಿ ರೂ ಮತ್ತು ಚೆಂಬು ಗ್ರಾ.ಪಂ.ವ್ಯಾಪ್ತಿಯಲ್ಲಿ 7 ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಸಂಸದರಾದ ಪ್ರತಾಪ್ ಅವರು ಶನಿವಾರ ನೆರವೇರಿಸಿದರು.
ಆರಂಭದಲ್ಲಿ ಪೆರಾಜೆ ಗ್ರಾಮದ ಶಾಸ್ತಾವು ದೇವಸ್ಥಾನಕ್ಕೆ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಶಾಸ್ತವು ದೇವಸ್ಥಾನದ ತಡೆಗೋಡೆ, ದೇವಸ್ಥಾನದ ಆವರಣದಲ್ಲಿ ಇಂಟರ್ ಲಾಕ್ ಅಳವಡಿಕೆ, ಅಮೆಚೂರು-ತೊಡಿಕಾನ ರಸ್ತೆಯ ಸೇತುವೆ ನಿರ್ಮಾಣ, ವಯನಾಟ್ ಕುಲವನ್ ದೇವಸ್ಥಾನದ ಬಳಿ ತಡೆಗೋಡೆ, ಸಮುದಾಯ ಭವನ, ಪೆರುಮುಂಡ-ಪಾಳ್ಯ-ಕುಂಡಾಡು ಗಿರಿಜನ ಕಾಲೋನಿ ಮತ್ತು ನಿಡ್ಯಮಲೆ ಬಳಿಯ ಗಿರಿಜನ ಕಾಲೋನಿ ರಸ್ತೆ ಕಾಂಕ್ರೀಟೀಕರಣ, ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಕುಂಡಾಡು-ಕಡ್ಯ ಕರಿಭೂತನಕೋಡಿ ರಸ್ತೆ ಕಾಂಕ್ರೀಟೀಕರಣ, ಕಡ್ಯ-ಕರಿಭೂತನಕೋಡಿ ರಸ್ತೆಯ ಸೇತುವೆ ನಿರ್ಮಾಣ, ಪೆರಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ, ಪೆರಾಜೆ ಗ್ರಾ.ಪಂ.ಆವರಣ ಮತ್ತು ಪರಿಶಿಷ್ಟ ಪಂಗಡ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಡಿಜಿಟಲ್ ಗ್ರಂಥಾಲಯ ಇವುಗಳನ್ನು ಶಾಸಕರು ಮತ್ತು ಸಂಸದರು ಉದ್ಘಾಟಿಸಿದರು.
ಅಮೆಚೂರು-ಕೋಡಿ-ಕೋಟೆ ಪೆರಾಜೆ ರಸ್ತೆ ನಿರ್ಮಾಣ, ಕೊಡ್ಯಗುಂಡಿ ಗಿರಿಜನ ಕಾಲೋನಿ ರಸ್ತೆ ನಿರ್ಮಾಣ, ಕುಂಬಳಚೇರಿ-ಬಂಡಸಾಲೆ ರಸ್ತೆ ನಿರ್ಮಾಣ, ನಿಡ್ಯಮಲೆ-ಹಾಲೆಕಾಡು ರಸ್ತೆಗೆ ಕಾಂಕ್ರೀಟ್ ಅಳವಡಿಕೆ, ಪೆರಾಜೆ ಗ್ರಾ.ಪಂ.ವ್ಯಾಪ್ತಿಯ 18 ಕಡೆಗಳಲ್ಲಿ ಮೋರಿ ನಿರ್ಮಾಣ, ಪೆರಾಜೆ-ಗಡಿಗುಡ್ಡೆ ರಸ್ತೆ ಮರು ಡಾಂಬರೀಕರಣ, ಕುಂಡಾಡು-ಚಾಮಕಜೆ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಮತ್ತು ಸಂಸದರು ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಪೆರಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 1.25 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2024 ರೊಳಗೆ ಗ್ರಾಮೀಣ ಪ್ರದೇಶದ ಪ್ರತೀ ಕುಟುಂಬಕ್ಕೂ ನಲ್ಲಿ ನೀರು ಒದಗಿಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪೆರಾಜೆ ಗ್ರಾ.ಪಂ.ಗೆ 1.80 ಕೋಟಿ ರೂ. ಬಿಡುಗಡೆ ಆಗಿದೆ ಎಂದು ಶಾಸಕರು ತಿಳಿಸಿದರು.
ಪೆರಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಇದುವರೆಗೆ ವಿದ್ಯುತ್ ಸಂಪರ್ಕ ಪಡೆಯದಿರುವ ಕುಟುಂಬಗಳು ಇದ್ದಲ್ಲಿ ಬೆಳಕು ಯೋಜನೆಯಡಿ ಕೂಡಲೇ ವಿದ್ಯುತ್ ಸಂಪರ್ಕ ಪಡೆಯುವಂತೆ ಶಾಸಕರು ಹೇಳಿದರು.
ಕಾಫಿ ಜೊತೆಗೆ ಅಡಿಕೆ ಬೆಳೆಗೂ ಸಹ ಬೆಳೆ ಪರಿಹಾರ ಸಿಗುತ್ತಿದೆ. ಕೃಷಿ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಕಾಲ ಕಾಲಕ್ಕೆ ಬೆಳೆ ಹಾನಿ ಪರಿಹಾರ ಜಮೆಯಾಗುತ್ತಿದೆ. ಬೆಳೆ ಪರಿಹಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಪ್ರಯತ್ನಿಸಲಾಗುವುದು ಎಂದು ಕೆ.ಜಿ.ಬೋಪಯ್ಯ ಅವರು ನುಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತೀ ಗ್ರಾಮವನ್ನು ಅಭಿವೃದ್ಧಿ ಪಡಿಸುವಲ್ಲಿ, ಪ್ರತೀ ಗ್ರಾ.ಪಂ.ಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸುತ್ತಿದೆ. ವಿದ್ಯಾರ್ಥಿಗಳು ಇದನ್ನು ಬಳಸಿಕೊಂಡು ಕೇಂದ್ರ ಮತ್ತು ರಾಜ್ಯ ನಾಗರಿಕ ಸೇವೆಯಲ್ಲಿ ಉನ್ನತ ಹುದ್ದೆ ಪಡೆಯುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ಸಲಹೆ ಮಾಡಿದರು.
ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಸರ್ಕಾರ ಈಗಾಗಲೇ ಶ್ರೀರಂಗಪಟ್ಟಣದಿಂದ ಕುಶಾಲನಗರದವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದೆ. ಆ ದಿಸೆಯಲ್ಲಿ ಮುಂದಿನ ಹಂತದಲ್ಲಿ ಮಡಿಕೇರಿಯಿಂದ ಬಂಟ್ವಾಳದವರೆಗೆ ರಸ್ತೆ ಅಗಲೀಕರಣಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿತ್ತು, ಈಗ ಚೇತರಿಸಿಕೊಳ್ಳುತ್ತಿದೆ. ಗ್ರಾ.ಪಂ.ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ನಿರೀಕ್ಷೆ ಮೀರಿ ಚುರುಕುಗೊಳ್ಳಲಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊರೊನಾ ನಿಯಂತ್ರಣ ಲಸಿಕೆ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ನಮ್ಮ ದೇಶದಲ್ಲಿಯೇ ಕೋವ್ಯಾಕ್ಸಿನ್ ಲಸಿಕೆಯನ್ನು ತಯಾರು ಮಾಡಿ, ಅರ್ಹರೆಲ್ಲರಿಗೂ ಕೋವಿಡ್ ನಿಯಂತ್ರಣ ಲಸಿಕೆಯನ್ನು ನೀಡಿರುವುದು ಪ್ರಥಮ ಕಾಳಜಿಯಾಗಿದೆ ಎಂದು ಪ್ರತಾಪ್ ಸಿಂಹ ಅವರು ನುಡಿದರು.
ಹಾಗೆಯೇ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಪ್ಲ್ಯಾಂಟ್ ನಿರ್ಮಿಸುವ ಮೂಲಕ ಜನರ ಪ್ರಾಣ ಮತ್ತು ಜೀವದ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಿರುವುದು ಶ್ಲಾಘನೀಯ ಕಾರ್ಯ ಎಂದು ಪ್ರತಾಪ್ ಸಿಂಹ ಅವರು ಹೇಳಿದರು.
ಸರ್ಕಾರ ಹೆದ್ದಾರಿ, ರೈಲ್ವೆ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ, ರಾಜ್ಯದ 30 ನಗರಗಳಲ್ಲಿ ಅಡುಗೆ ಅನಿಲ ಪೈಪ್ಲೈನ್ ಅಳವಡಿಸಲು ಮುಂದಾಗಲಾಗಿದೆ. ಹೀಗೆ ಸಾಕಷ್ಟು ಸುಧಾರಣೆ ಮತ್ತು ಬದಲಾವಣೆಗಳು ಆಗುತ್ತಿವೆ ಎಂದು ಸಂಸದರಾದ ಪ್ರತಾಪ್ ಸಿಂಹ ಅವರು ಹೇಳಿದರು.
ದೇಶದ ಸಂಸ್ಕøತಿ, ನೆಲ, ಜಲ ಸಂರಕ್ಷಿಸಿ ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ಸಂಸದರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ ಸರ್ಕಾರ ಗ್ರಾಮೀಣ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಹೀಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದೆ. ಇತ್ತೀಚೆಗೆ ಎಲ್ಲಾ ಗ್ರಾ.ಪಂ. ಮಟ್ಟದ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಹಾಗೆಯೇ ವಿದ್ಯಾರ್ಥಿ ನಿಲಯಗಳಲ್ಲಿಯೂ ಸಹ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 15 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೋವಿಡ್ ನಿಯಂತ್ರಣ ಲಸಿಕೆ ನೀಡುವ ಮೂಲಕ ಜನರ ಜೀವವನ್ನು ಉಳಿಸಿದ್ದಾರೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ವಿಶ್ವದಲ್ಲಿ ಮುಂಚೂಣಿ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ಶ್ರಮಿಸುತ್ತಿದ್ದಾರೆ ಎಂದು ನುಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ವಿಧಾನಸಭಾ ಅಧ್ಯಕ್ಷರಾಗಿದ್ದ ಸಂದರ್ಭ ಹಾಗೂ ಪ್ರಸ್ತುತ ಸರ್ಕಾರದಲ್ಲಿಯೂ ಸಹ ಹೆಚ್ಚಿನ ಅನುದಾನ ತರುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಅವರು ಮಾತನಾಡಿ ಪೆರಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 1.25 ಕೋಟಿ ರೂ.ಗೂ ಹೆಚ್ಚು ಅನುದಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಪೆರಾಜೆ ಗ್ರಾಮದ ಶಾಸ್ತಾವು ದೇವಸ್ಥಾನದ ಬಳಿ ತಡೆಗೋಡೆ ನಿರ್ಮಾಣ, ಇಂಟರ್ ಲಾಕ್ ಅಳವಡಿಕೆ ಮತ್ತಿತರ ಕಾಮಗಾರಿಗಳ ಸಂಬಂಧ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಎಸ್.ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಪೆರಾಜೆ ಗ್ರಾ.ಪಂ.ಅಧ್ಯಕ್ಷರಾದ ಚಂದ್ರಕಲಾ ಬಾಲಚಂದ್ರ, ಉಪಾಧ್ಯಕ್ಷರಾದ ಜಯಲಕ್ಷ್ಮಿ ಧರಣೀದರ, ಚೆಂಬು ಗ್ರಾ.ಪಂ. ಅಧ್ಯಕ್ಷರಾದ ಕುಸುಮ, ಮಡಿಕೇರಿ ತಾಲ್ಲೂಕು ಅಕ್ರಮ ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ಉಪಾಧ್ಯಾಯ ಇತರರು ಇದ್ದರು.