ಶಾಲೆಗಳು ಕಳುಹಿಸಿರುವ ಸುತ್ತೋಲೆಯಲ್ಲಿ ಮಕ್ಕಳನ್ನು ಶಾಲೆಗೆ ಬಿಡುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಪೋಷಕರು ಅಥವಾ ಪಾಲಕರು ಬರ್ಮುಡಾ, ಶಾರ್ಟ್ಸ್, ಸ್ಪೋರ್ಟ್ಸ್ ವೇರ್, ಹೌಸ್ ವೇರ್, ಸ್ಲೀವ್‌ಲೆಸ್ ಮತ್ತು ಟ್ರ್ಯಾಕ್ ಪ್ಯಾಂಟ್ ಇತ್ಯಾದಿಗಳನ್ನು ಧರಿಸುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಕೆಲವು ಶಾಲೆಗಳು ಸುತ್ತೋಲೆಯನ್ನು ಹೊರಡಿಸಿದೆ.
ಅಲ್ಲದೇ ಬೆಂಗಳೂರು ದಕ್ಷಿಣದಲ್ಲಿರುವ ಒಂದು ಪ್ರಾಥಮಿಕ ಶಾಲೆ ಹೊರಡಿಸಿದ ಸುತ್ತೋಲೆಯ ಪ್ರಕಾರ, "ಶಾಲೆಗೆ ಭೇಟಿ ನೀಡುವಾಗ ಡ್ರೆಸ್ ಕೋಡ್‌ಗೆ ಬದ್ಧರಾಗಿರಿ. ಫಾರ್ಮಲ್/ಸೆಮಿ ಫಾರ್ಮಲ್ ಬಟ್ಟೆಯನ್ನು ಧರಿಸಿ. ಶಾರ್ಟ್ಸ್, ಬರ್ಮುಡಾ, ಸ್ಲೀವ್‌ಲೆಸ್, ಟ್ರ್ಯಾಕ್ ಪ್ಯಾಂಟ್‌ಗಳು, ಸ್ಪೋರ್ಟ್ಸ್ ವೇರ್, ನೈಟ್‌ವೇರ್, ಹೌಸ್ ವೇರ್ ಇತ್ಯಾದಿಗಳನ್ನು ಧರಿಸುವುದನ್ನು ತಪ್ಪಿಸಿ," ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಖಾಸಗಿ ಶಾಲೆಗಳ ಆಡಳಿತ ಪ್ರತಿನಿಧಿಗಳು ಮತ್ತು ಮುಖ್ಯ ಪ್ರಾಧ್ಯಾಪಕರ ಪ್ರಕಾರ, ಪೋಷಕರು ಅಥವಾ ಪಾಲಕರು ಮಕ್ಕಳನ್ನು ಶಾಲೆಯಲ್ಲಿ ಬಿಡಲು ಬರುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಯಾವ ಬಟ್ಟೆ ಹಾಕಬಹುದು ಹಾಗೂ ಯಾವ ಬಟ್ಟೆಯನ್ನು ಹಾಕಬಾರದು ಎಂಬ ಡ್ರೆಸ್ ಕೋಡ್ ಅನ್ನು ವಿಧಿಸಲು ಒತ್ತಾಯ ಮಾಡಿದೆ.
ಈ ಕುರಿತು ಮಾತನಾಡಿದ ಬೆಂಗಳೂರಿನ ಜಯನಗರದಲ್ಲಿರುವ ಖಾಸಗಿ ಅನುದಾನರಹಿತ ಶಾಲೆಯ ಪ್ರಾಂಶುಪಾಲರು, "ನಮ್ಮ ಶಿಕ್ಷಕರು, ಸಿಬ್ಬಂದಿ ಮತ್ತು ಕೆಲವು ಪೋಷಕರಿಗೆ ಎಷ್ಟು ಮುಜುಗರವಾಗುತ್ತದೆ ಎಂದು ನೀವು ನಂಬುವುದಿಲ್ಲ. ಕೆಲವು ಪಾಲಕರು ತಮ್ಮ ನೈಟ್‌ವೇರ್‌ಗಳನ್ನು ಹಾಕಿಕೊಂಡು ಮಕ್ಕಳನ್ನು ಶಾಲೆಗೆ ಬಿಡಲು ಅಥವಾ ಶಾಲೆಯಿಂದ ಕರೆದುಕೊಂಡು ಹೋಗಲು ಬರುತ್ತಾರೆ," ಎಂದು ತಿಳಿಸಿದ್ದಾರೆ.