ಬೆಂಗಳೂರು: ನಾಳೆಯಿಂದ ಮನೆಮನೆ ಬಾಗಿಲಿಗೆ ಸಮೀಕ್ಷೆ ಸಿಬ್ಬಂದಿ ಬರಲಿದ್ದಾರೆ. ರಾಜ್ಯ ಸರ್ಕಾರ ಇಡೀ ರಾಜ್ಯದಲ್ಲಿ ಹೊಸದೊಂದು ಸಮೀಕ್ಷೆಗೆ ಚಾಲನೆ ನೀಡಲಿದೆ. ಹಿಂದುಳಿದ ಆಯೋಗದ ಮೂಲಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ನಡೆಸಲಾಗುತ್ತದೆ.
ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಾಳೆಯಿಂದಲೇ ಅಧಿಕೃತವಾಗಿ ಹಿಂದುಳಿದ ಆಯೋಗ ನಡೆಸಲಿದೆ. ಈ ಬಗ್ಗೆ ಹಿಂದುಳಿದ ಆಯೋಗ ಕೂಡ ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದೆ.
ಸಮೀಕ್ಷಾ ಕಾರ್ಯಕ್ಕಾಗಿ ಶಿಕ್ಷಕರು, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಮೀಕ್ಷೆಯನ್ನ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ತರಬೇತಿ ನೀಡಲಾಗಿದೆ.
ಇನ್ನೂ ಸಾರ್ವಜನಿಕರು ಕೂಡ ಸಮೀಕ್ಷೆ ವೇಳೆಯಲ್ಲಿ ಕೆಲ ದಾಖಲೆಗಳನ್ನ ಸಿದ್ಧ ಮಾಡಿಟ್ಟುಕೊಂಡರೇ ಸಮೀಕ್ಷೆಯ ವೇಳೆಯಲ್ಲಿ ಯಾವುದೇ ಗೊಂದಲವಾಗಲಿ, ಸಮಸ್ಯೆಗಳಾಲಿ ಆಗೋದಿಲ್ಲ. ಜನರು ಆಧಾರ್ ಕಾರ್ಡ್, ರೇಷನ್‌ಕಾರ್ಡ್, ಮತದಾನದ ಗುರುತಿನ ಚೀಟಿ, ವಿದ್ಯಾಭ್ಯಾಸದ ಅಂಕ ಪಟ್ಟಿ ಹೊಂದಿರಬೇಕು.
ಕುಟುಂಬದ ಎಲ್ಲ ಸದಸ್ಯರು ಈ ದಾಖಲೆಗಳನ್ನು ರೆಡಿ ಮಾಡಿಟ್ಟುಕೊಂಡು ಸಮೀಕ್ಷೆಗೆ ಅಧಿಕಾರಿಗಳು ಬಂದಾಗ ಗುರುತಿನ ಚೀಟಿಯ ನಂಬರ್‌ಗಳನ್ನು ಹೇಳಿದರೆ ಸಾಕು, ಇದರ ಜೊತೆಗೆ ನೀವು ನೀಡಬೇಕಾದ ಮಾಹಿತಿಗಳ ಬಗ್ಗೆಯೂ ಸಹ ಗಮನವಿರಲಿ.
ಮುಖ್ಯವಾಗಿ ಧರ್ಮ, ಜಾತಿ, ಉಪಜಾತಿ, ಜಾತಿಗೆ ಇರೋ ಸಮನಾರ್ಥಕ ಹೆಸರಿದ್ದಲ್ಲಿ ಅದು, ಕುಟುಂಬದ ಎಲ್ಲ ಸದಸ್ಯರ ಶೈಕ್ಷಣಿಕ ಮಟ್ಟ, ಕುಟುಂಬದವರ ಆಸ್ತಿಯ ವಿವರಗಳು, ಆಧಾರ್ ಕಾರ್ಡ್ ನೊಂದಾಯಿತ ನಂಬರ್‌ಗೆ ಕೆವೈಸಿ ಕೂಡ ಬರಲಿದೆ.
ಒಟ್ಟಿನಲ್ಲಿ ಅನೇಕ ಗೊಂದಲಗಳ ನಡುವೆಯೂ ನಾಳೆಯಿಂದ ಸಮೀಕ್ಷೆ ಶುರುವಾಗಲಿದೆ. ಅಕ್ಟೋಬರ್ 7ರವರೆಗೆ ಸಮೀಕ್ಷೆ ನಡೆಯಲಿದೆ.