Publish Date: Mon, 08 Sep 2025 (16:10 IST)
Updated Date: Mon, 08 Sep 2025 (16:12 IST)
ಬೆಂಗಳೂರು: ಬಿಜೆಪಿಯವರು ಅನವಶ್ಯಕವಾಗಿ ಪ್ರಚೋದನೆ ಮಾಡುವುದರಲ್ಲಿ ನಿಸ್ಸೀಮರು ಎಂದು ಮದ್ದೂರು ಗಲಭೆ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸಮಾಜದ ಸ್ವಾಸ್ಥ್ಯ, ನೆಮ್ಮದಿ ಕೆಡಿಸುವುದರಲ್ಲಿ ನಿಸ್ಸೀಮರು. ಈ ಪ್ರಕರಣ ಸಂಬಂಧ ಅನಗತ್ಯವಾಗಿ ಗುಂಪು ಸೇರಿ ಗಲಾಟೆ ಮಾಡಿಸುವವರು, ಮಾಡುವವರ ಮೇಲೆ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮದ್ದೂರಿಗೆ ಹೋಗುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿ ಅವರು ನೀಡುವ ವರದಿ ಮೇಲೆ ಮುಂದಿನ ಕ್ರಮ ಎಂದರು.
ಮೆರವಣಿಗೆ ಸಂದರ್ಭದಲ್ಲಿ ಬಾವುಟ ತೆರವು ಮಾಡುವ ವೇಳೆ ಗಲಾಟೆ ನಡೆದಿದೆ ಎಂಬ ಮಾಹಿತಿಯಿದೆ. ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಹಿಂಸಾಚಾರ ನಡೆಯುತ್ತಿರಲಿಲ್ಲವಲ್ಲಾ ಎಂದು ಕೇಳಿದ್ದಕ್ಕೆ ಸಿಎಂ, ಅಲ್ಲಿ ಏನು ನಡೆದಿದೆ ಎಂದು ವರದಿ ಸಂಪೂರ್ಣ ಬಂದ ಮೇಲೆ ತೀರ್ಮಾನ ಮಾಡುತ್ತೇವೆ ಎಂದರು.