ರಾಜ್ಯದ ಪ್ರಸಕ್ತ ವಿದ್ಯಮಾನಗಳ ಕುರಿತು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ಕರೆದ ಮಾಜಿ ಪ್ರಧಾನಿ ದೇವೇಗೌಡರು, ಹಲವು ವಿಚಾರಗಳನ್ನ ಹಂಚಿಕೊಂಡ್ರು. ಇದೇ ವೇಳೆ ನೈಸ್ ಹಗರಣ ಪ್ರಸ್ತಾಪ ಮಾಡಿದ ಅವರು, ಬೊಮ್ಮಾಯಿ ಸಿಎಂ ಆಗಿದ್ದಾಗ ಸದನ ಸಮಿತಿ ರಚನೆ ಮಾಡಿದ್ರು. ಸದನ ಸಮಿತಿ ವರದಿಯಲ್ಲಿ 11,668 ಎಕರೆ ಜಮೀನು ಸರ್ಕಾರಕ್ಕೆ ವಾಪಸ್ ಕೊಡುವಂತೆ ವರದಿ ನೀಡಿದೆ. ಯಾರ ಭೂಮಿ ಇದು ಅಂತ ಪ್ರಶ್ನೆ ಮಾಡಿದ ಅವರು, ಭೂಮಿ ವಾಪಸ್ ಪಡೆಯಲು ಸಿದ್ದರಾಮಯ್ಯಗೆ ಏನು ಕಷ್ಟ ಇದೆ. ಹೆಚ್ಚುವರಿ ಜಮೀನಿಗೆ ಕೋಟ್ಯಾಂತರ ರೂಪಾಯಿ ಸರ್ಕಾರಕ್ಕೆ ಆದಾಯ ಬರಲಿದ್ದು, ಇದರಲ್ಲಿ ಬರೋ ಹಣವನ್ನ ನಿಮ್ಮ ಐದು ಉಚಿತ ಕಾರ್ಯಕ್ರಮಕ್ಕೆ ಬಳಸಿಕೊಳ್ಳಿ. ಅಧಿಕಾರ ಇರುತ್ತೆ ಹೋಗುತ್ತೆ, ಆದ್ರೆ ಸಿದ್ದರಾಮಯ್ಯ ಅವರೇ ನೀವು ಮಾತಾಡೋ ಮಾತು ಹೃದಯದ ಅಂತರಾಳದಿಂದ ಬರಬೇಕು ಅಂತ ಆಕ್ರೋಶ ಹೊರಹಾಕಿದ್ರು.
ಮುಂಬರುವ 2024ರ ಲೋಕಸಭಾ ಚುನಾವಣೆಗೆ ಜೆಡಿಎಸ್ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳೋದಿಲ್ಲ ಅಂತ, ದೇವೇಗೌಡರು ಸ್ಪಷ್ಟಪಡಿಸಿದ್ರು. ನಾವು ಚುನಾವಣೆಯಲ್ಲಿ ಎಷ್ಟೇ ಸ್ಥಾನಗಳನ್ನ ಗೆಲ್ಲಬಹುದು, ಸೋಲಬಹುದು. ಆದ್ರೆ ನಮಗೆ ಶಕ್ತಿ ಇರುವ ಕಡೆ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ, ಅಭ್ಯರ್ಥಿಗಳನ್ನ ಕಣಕ್ಕಿಳಿಸುತ್ತೇವೆ. ಆದ್ರೆ ಯಾರ ಜೊತೆಗೂ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸೋದಿಲ್ಲ. ಸರ್ಕಾರ ರಚನೆ ವೇಳೆ ಯಾರ ಜೊತೆ ಹೋಗಬೇಕು ಅನ್ನೋದು ಮುಂದೆ ನಿರ್ಧಾರ ಮಾಡ್ತೀವಿ ಅಂತ ಮಾಹಿತಿ ನೀಡಿದ್ರು. ಇದೇ ವೇಳೆ ತಾನು ಲೋಕಸಭೆ ಚುನಾವಣೆ ನಿಲ್ಲೋದಿಲ್ಲ ಅನ್ನೋ ಸುಳಿವನ್ನೂ ನೀಡಿದ್ರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮಹಾಘಟಬಂಧನ್ ಸಭೆಗೆ ಆಹ್ವಾನ ಇರಲಿಲ್ವಾ ಅನ್ನೋ ವಿಚಾರವಾಗಿ ಮಾತನಾಡಿದ ದೇವೇಗೌಡರು. ಕೆಲ ಕಾಂಗ್ರೆಸ್ ನಾಯಕರು ದೇವೇಗೌಡರು ಬರೋದಾದ್ರೆ ನಾವು ಬರೋದಿಲ್ಲ ಅಂತ ಹೇಳಿದ್ರಂತೆ. ಹಾಗಾಗಿ ಕಾಂಗ್ರೆಸ್ ಹೊರತುಪಡಿಸಿ, ನಿತೀಶ್ ಕುಮಾರ್ ಹಾಗೂ ಅನೇಕರು ನನ್ನನ್ನ ಕರೆದ್ರು. ಹಾಗಾಗಿ ನಾನು ಮಹಾಘಟಬಂಧನ್ ಸಭೆಯಲ್ಲಿ ಭಾಗಿಯಾಗಲಿಲ್ಲ ಅಂತ ಸ್ಪಷ್ಟಪಡಿಸಿದ್ರು. ಆದ್ರೆ ಯಾವ ಕಾಂಗ್ರೆಸ್ ನಾಯಕರ ಬಣ ಬರೋದಿಲ್ಲ ಅಂತ ಹೇಳಿದ್ರು ಅನ್ನೋ ವಿಚಾರವನ್ನ, ದೇವೇಗೌಡರು ಬಹಿರಂಗಪಡಿಸಲು ಇಷ್ಟಪಡಲಿಲ್ಲ.