Select Your Language

Notifications

webdunia
webdunia
webdunia
webdunia

ಹೋಳಾ ಹುಣ್ಣಿಮೆ ವಿಶೇಷ ನಿಮಗಿದು ಗೊತ್ತಾ?

ಹೋಳಾ ಹುಣ್ಣಿಮೆ ವಿಶೇಷ ನಿಮಗಿದು ಗೊತ್ತಾ?
ಕಲಬುರಗಿ , ಬುಧವಾರ, 21 ಆಗಸ್ಟ್ 2019 (19:42 IST)
ಭಾರತ ದೇಶದಲ್ಲಿ ಮಾತ್ರ ಪ್ರಾಣಿಗಳನ್ನು ಗೌರವಿಸುವ, ಸತ್ಕರಿಸುವ ಹಾಗೂ ವಿಶೇಷ ಹಬ್ಬಗಳನ್ನು ಆಚರಿಸುವ ವಿಶೇಷ ಸಂಸ್ಕøತಿ ಮತ್ತು ಪರಂಪರೆಯಿದೆ. ಕೃಷಿ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿರುವ ಎತ್ತುಗಳು ಕೃಷಿ ಚಟುವಟಿಕೆಯಲ್ಲಿ  ಹಗಲಿರುಳು ಶ್ರಮಿಸುತ್ತವೆ. ಈ ಎತ್ತುಗಳಿಗೆ ಕೃತಜ್ಞತಾ ಭಾವ ವ್ಯಕ್ತಪಡಿಸಲೆಂದೇ ರೈತರು “ಕಾರಹುಣ್ಣಿಮೆ” ಹಾಗೂ “ಹೋಳಾ” ಹಬ್ಬಗಳನ್ನು ಆಚರಿಸುವ ಮೂಲಕ ಎತ್ತುಗಳ ಬಗ್ಗೆ ವಿಶೇಷ ಕಾಳಜಿ, ಪೂಜನೀಯ ಮತ್ತು ಗೌರವಪೂರ್ವಕ ಭಾವನೆ ತೋರುವರು.

ಮಹಾರಾಷ್ಟ್ರ ರಾಜ್ಯದಲ್ಲಿ ಪೋಳಾ ಹಬ್ಬಕ್ಕೆ “ಬೈಲ ಪೋಳಾ” ವೃಷಭ ಪೂಜನ ಎತ್ತುಗಳ ಹಬ್ಬವೆಂದು ಹಾಗೂ ಜಾರ್ಖಂಡ್, ಛತ್ತೀಸಗಢ ರಾಜ್ಯ ಮತ್ತು ಖಂಡವಾ ಮತ್ತಿತರ ಪ್ರದೇಶಗಳಲ್ಲಿ ಲೋಕಪರ್ವದ ರೂಪದಲ್ಲಿ ವಿಜೃಂಭಣೆಯಿಂದ ಈ ಹಬ್ಬ ಆZರಿಸುವರು. ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೈತರು ಕಾರಹುಣ್ಣಿಮೆಯನ್ನು ಮತ್ತು ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡ ರಾಜ್ಯದ ಬೀದರ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ “ಹೋಳಾ” ಹಬ್ಬವನ್ನು ವಿಭಿನ್ನ ದಿನಗಳಂದು ಆಚರಿಸುವರು.

ಮರಾಠಿ ಭಾಷೆಯ “ಪೋಳಿ” ಮೂಲ ಶಬ್ದದಿಂದ “ಪೋಳಾ” ಶಬ್ದವಾಗಿದ್ದು, ಇದೇ “ಪೋಳಾ” ಕನ್ನಡದಲ್ಲಿ “ಹೋಳಾ” ರೂಪ ತಾಳಿರಬಹುದು. ಕನ್ನಡದ ಆಡು ಭಾಷೆಯಲ್ಲಿಯೂ ಬೀಜದ ಹೋರಿಗೆ ಪೋಳ್ ಎನ್ನುವರು. ಕಾರಹುಣ್ಣಿಮೆಯ ದಿನ ಕಳೆದುಹೋದ ಎತ್ತುಗಳು ಶ್ರಾವಣ ಮಾಸಾಂತ್ಯದಲ್ಲಿ ಬರುವ ದರ್ಶ ಅಥವಾ ಪಿಠೋರಿ(ವದ್ಯ) ಅಮಾವಾಸ್ಯೆಯಂದು ಸಿಕ್ಕಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್ 30ರಂದು ಶುಕ್ರವಾರ ಹೋಳಾ ಹಬ್ಬವನ್ನು ಆಚರಿಸಲಾಗುತ್ತದೆ.

ರೈತರು ಹಬ್ಬದ ಹಿಂದಿನ ದಿನ ಅರಿಶಿಣ ಮತ್ತು ಎಣ್ಣೆಯಿಂದ ಎತ್ತುಗಳ ಹೆಗಲಿಗೆ ಮಾಲೀಶ್ ಮಾಡಿ ಶಾಖ ನೀಡಿ ಸ್ನಾನ ಮಾಡಿಸುವರು. ಹಬ್ಬದಂದೂ ಸ್ನಾನ ಮಾಡಿಸಿ ಅವುಗಳ ಕೊಂಬುಗಳನ್ನು ವಿವಿಧ ಬಣ್ಣಗಳಿಂದ ಅಲಂಕರಿಸುವರು. ಕೊರಳಲ್ಲಿ ಕವಡೆ ಮತ್ತು ಗೆಜ್ಜೆನಾದದ ಸರಮಾಲೆ, ಕಾಲುಗಳಲ್ಲಿ ಗೆಜ್ಜೆ(ತೋಡೆ) ಮತ್ತು ಬೆನ್ನಲ್ಲಿ ಬಣ್ಣಬಣ್ಣದÀ ಝೂಲ್ ಮತ್ತು ಬೆಲೆಬಾಳುವ ಶಾಲು, ಹಣೆಗೆ ರಂಗುರಂಗಿನ ಹಗ್ಗಗಳಿಂದ ತಯಾರಿಸಿದ ಬಾಸಿಂಗ್ ತೊಡಿಸುವರು. ಗುಗ್ಗರಿ ಮತ್ತಿತರ ದ್ರವ ಪದಾರ್ಥ ನೀಡುವರಲ್ಲದೇ ಎತ್ತುಗಳ ನಿಯಂತ್ರಣಕ್ಕಾಗಿ ಬಳಸಲಾಗುವ ನೊಗದ ಹಗ್ಗವನ್ನು ಸಹ ಬದಲಾಯಿಸುವರು.
ಮಧ್ಯಾಹ್ನದವರೆಗೆ ಎತ್ತುಗಳ ಮೆರವಣಿಗೆ ಮತ್ತು ಹನುಮಂತನ ದರ್ಶನದ ಬಳಿಕ ಮನೆಯಲ್ಲಿ ಮುತ್ತೈದೆಯರು ಪೂಜಿಸುವರು. ಎತ್ತುಗಳಿಗೆ ತುಪ್ಪದೊಂದಿಗೆ ಹೂರಣ ಹೋಳಿಗೆ, ಕರ್ಚೇಕಾಯಿ, ಹುಗ್ಗಿ ಮುಂತಾದ ಮೃಷ್ಠಾನ್ನ ಭೋಜನ ಮಾಡಿಸುವರು. ಎತ್ತುಗಳ ಪೂಜೆ ಮಾಡುವ ರೈತರು ಸದರಿ ದಿನದಂದು ಉಪವಾಸವಿರುವರು. ಎತ್ತುಗಳ ಊಟದ ನಂತರವೇ ಇವರ ಊಟ. ಸಂಜೆ ಆಯಾ ಗ್ರಾಮದ 40-50 ಜೋಡಿ ಎತ್ತುಗಳನ್ನು ಸಣ್ಣಬಂಡಿಗೆ ಜೋಡಿಸಿ ಊರಲ್ಲಿ ವಾದ್ಯಮೇಳದೊಂದಿಗೆ ಆಕರ್ಷಕ ಮೆರವಣಿಗೆ ನಡೆಯುವುದು.

webdunia
ಗ್ರಾಮದ ಮುಖಂಡರು ಊರಿನ ಅಗಸಿ ಬಾಗಿಲಿನಲ್ಲಿ ಕರಿ ಕಡಿದ ನಂತರ ಎತ್ತುಗಳ ಓಟದ ಸ್ಪರ್ಧೆ ಪ್ರಾರಂಭವಾಗುತ್ತದೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ಸಣ್ಣ ಚಕ್ಕಡಿಯ ಮೇಲೆ ನಿಂತು ಎತ್ತುಗಳನ್ನು ಓಡಿಸುವವರ ಸಾಹಸ ಮೆಚ್ಚುವಂಥದ್ದು. ಈ ಓಟದ ಮಧ್ಯದಲ್ಲೇ ಏಳುತ-ಬೀಳುತ ಓಟ ಪೂರ್ಣಗೊಳಿಸುವ ದೃಶ್ಯ ಕಂಡಾಗ ಮೈ ಜುಂ..! ಎನ್ನುತ್ತದೆ. ಈ ಸಾಹಸಮಯ ದೃಶ್ಯಾವಳಿಗಳನ್ನು ರಸ್ತೆಯ ಇಕ್ಕೆಲಗಳಲ್ಲಿ, ಮಾಳಿಗೆ ಮೇಲೆ, ಅಂಗಡಿ-ಮುಂಗಟ್ಟು ಕಟ್ಟೆಗಳ ಮೇಲೆ ನಿಂತು ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಕಣ್ತುಂಬ ನೋಡಿ ಆನಂದಿಸುವರು.

ಸ್ಪರ್ಧೆಯ ಬಳಿಕ ಒಂದೂ ಹೊಡೆತವಿಲ್ಲದೆ ಜೋರಾಗಿ ಓಡುವ ಎತ್ತುಗಳಿಗೆ ಹಾಗೂ ಉತ್ತಮ ಜೋಡೆತ್ತುಗಳಿಗೆ ಬಹುಮಾನ ವಿತರಿಸಲಾಗುತ್ತದೆ. ಈ ಹಬ್ಬದ ಆಚರಣೆಯಲ್ಲಿ ಎಲ್ಲ ಧರ್ಮೀಯರು ಹರ್ಷೋಲ್ಲಾಸದಿಂದ ಪಾಲ್ಗೊಳ್ಳುವುದರಿಂದ ಎಲ್ಲ ಪ್ರಾಣಿಗಳನ್ನು ಗೌರವಿಸಬೇಕೆಂಬ ಸಂದೇಶ ಸಾರುವ ಈ ಹಬ್ಬವು ಭಾವೈಕ್ಯತೆಯ ಸಂಕೇತವಾಗಿದೆ. ನಮ್ಮ ಜನಪದ ಸಂಸ್ಕøತಿ, ಪರಂಪರೆ ಮತ್ತು ಹಳೆಯ ಪಳೆಯುಳಿಕೆಗಳು ಇಂದಿಗೂ ಜೀವಂತವಾಗಿರುವುದಕ್ಕೆ ಹೋಳಾ ಹಬ್ಬವು ದೇಶಿ ಮತ್ತು ಕೃಷಿ ಸಂಸ್ಕøತಿಯ ಜೀವ-ಜೀವಾಳವಾಗಿದೆ. ಈ ಹಬ್ಬವನ್ನು ಬೀದರ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಇಂದಿಗೂ ಸಂಭ್ರಮ ಸಡಗರದಿಂದ ಆಚರಿಸುತ್ತಿರುವುದು ವಿಶೇಷವಾಗಿದೆ.

ಲೇಖಕರು: 
ಜಿ. ಚಂದ್ರಕಾಂತ
ನಿವೃತ್ತ ಉಪ ನಿರ್ದೇಶಕರು,
ವಾರ್ತಾ ಇಲಾಖೆ, ಕಲಬುರಗಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಲ್ಲಿ ತಾರಕಕ್ಕೇರಿದ ಭಿನ್ನಮತ : ರಾಜಕೀಯ ನಿವೃತ್ತಿ ಎಂದ ಎಂ.ಪಿ.ರೇಣುಕಾಚಾರ್ಯ