ಮಂಡ್ಯ: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳಿಸುವಲ್ಲಿ ಡಿಕೆ ಶಿವಕುಮಾರ್ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಆದ್ದರಿಂದ ಅವರು ಸಿಎಂ ಆಗಬೇಕೆಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಪಕ್ಷಕ್ಕಾಗಿ ಶ್ರಮಪಟ್ಟವರಿಗೆ ಸಿಎಂ ಆಗುವ ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ಸಿಎಂ ಆಗುವ ಹಂಬಲ ಇದ್ದೇ ಇರುತ್ತದೆ. ಅದೇ ರೀತಿ ನಾವು ಕೂಡ ಸಿಎಂ ಆಗಲಿ ಎಂದು ಬಯಸುತ್ತೇವೆ. ಡಿ.ಕೆ.ಶಿವಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ. ತಾಳ್ಮೆಯಿಂದ ಕಾಯ್ದು, ಒಳ್ಳೆಯ ಸ್ಥಾನ ಪಡೆದುಕೊಳ್ಳುತ್ತಾರೆ. ಹತ್ತಿರದಿಂದ ನೋಡಿದ ನಾನು ಅವರು ಯಾವುದಕ್ಕೂ ಆತುರಪಡುವುದಿಲ್ಲ. ಸಂಯಮದಿಂದ ಪಕ್ಷವನ್ನು ಮುನ್ನಡೆಸಿ ಇಲ್ಲಿಯವರೆಗೆ ತಂದಿದ್ದಾರೆ ಎಂದರು.
ಒಕ್ಕಲಿಗ ಸಮುದಾಯ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲಿ ಎಂದು ಚುನಾವಣೆಯಲ್ಲಿ ಬೆಂಬಲಿಸಿತ್ತು. ಮೈಸೂರು ಭಾಗದಲ್ಲಿ ಹೆಚ್ಚು ಒಲವು ತೋರಿದ್ದಕ್ಕಾಗಿ ಕಾಂಗ್ರೆಸ್‌ಗೆ ಹೆಚ್ಚು ಸೀಟುಗಳು ಬಂದವು. ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತದೆ ಎಂಬುದನ್ನು ಕಾದು ನೋಡೋಣ. ದೇವರ ಅನುಗ್ರಹ ಅವರ ಮೇಲೆ ಇರಲಿ ಎಂದು ಶುಭ ಹಾರೈಸಿದರು.