ಬೆಂಗಳೂರು: ನನ್ನ ಮುಂದಿನ ಸಿಎಂ ಅಂತೆಲ್ಲಾ ಕರೀಬೇಡಿ. ನಂಗೆ ಯಾರ ಬೆಂಬಲವೂ ಬೇಕಾಗಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಶೃಂಗೇರಿ ಮಠದ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿ 50 ವರ್ಷವಾದ ಹಿನ್ನಲೆಯಲ್ಲಿ ನಡೆಯುತ್ತಿರುವ ಸುವರ್ಣ ಭಾರತೀ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂದಾಗ ಕೆಲವು ಬೆಂಬಲಿಗರು ಅವರನ್ನು ಮುಂದಿನ ಕರ್ನಾಟಕ ಸಿಎಂ ಎಂದು ಘೋಷಣೆ ಕೂಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ಡಿಕೆಶಿ, ನನ್ನನ್ನು ಯಾರೂ ಮುಂದಿನ ಸಿಎಂ ಎಂದು ಕೂಗಬೇಡಿ. ನನಗೆ ಯಾರ ಬೆಂಬಲವೂ ಬೇಕಾಗಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನು ಮೊನ್ನೆಯಿಂದ ಟೆಂಪಲ್ ರನ್ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ ನಾನು ದೇವರನ್ನು ನಂಬುತ್ತೇನೆ, ದೇವಸ್ಥಾನಗಳಿಗೆ ಹೋಗುತ್ತಿರುತ್ತೇನೆ. ದೇವನೊಬ್ಬ ನಾಮ ಹಲವು ಎಂಬ ತತ್ವದ ಮೇಲೆ ನಂಬಿಕೆಯಿಟ್ಟವನು ನಾನು. ದೇವಸ್ಥಾನಗಳಿಗೆ ಹೋಗಬಾರದು ಎಂದರೆ ಬೀಗ ಜಡಿದು ಬಿಡಿ ಎಂದು ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.