ಬೆಂಗಳೂರು: ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಚಟುವಟಿಕೆಗಳು ಕಾಂಗ್ರೆಸ್ ಕಣ್ಣು ಕೆಂಪಗಾಗಿಸಿದೆ. ಅದರಲ್ಲೂ ನಿನ್ನೆ ಶಿವರಾತ್ರಿ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಜೊತೆ ಡಿಕೆಶಿ ವೇದಿಕೆ ಹಂಚಿಕೊಂಡಿದ್ದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಡಿಕೆ ಶಿವಕುಮಾರ್ ಇತ್ತೀಚೆಗೆ ಮುಂದಿನ ಚುನಾವಣೆ ನನ್ನ ನಾಯಕತ್ವದಲ್ಲೇ ಎಂದಿದ್ದರು. ಕಾಂಗ್ರೆಸ್ ನ ಕೆಲವು ನಾಯಕರು ಕುಂಭಮೇಳದ ಬಗ್ಗೆ ಟೀಕೆ ಮಾಡುತ್ತಿದ್ದರೂ ಯಾರು ಏನೇ ಹೇಳಿದರೂ ನಾನು ಕುಂಭಮೇಳಕ್ಕೆ ಹೋಗುವುದಾಗಿ ಹೋಗಿದ್ದ ಡಿಕೆಶಿ ಪುಣ್ಯಸ್ನಾನ ಮಾಡಿದ್ದರು.
ಅಲ್ಲಿಂದ ಬಂದ ಮೇಲೆಯೂ ಕುಂಭಮೇಳ ಆಯೋಜನೆ ಬಗ್ಗೆ ಹೊಗಳಿದ್ದರು. ಇದರ ಬೆನ್ನಲ್ಲೇ ನಿನ್ನೆ ಇಶಾ ಫೌಂಡೇಷನ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ವಿರೋಧದ ನಡುವೆಯೂ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಅಷ್ಟೂ ಸಾಲದೆಂಬಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದರು. ಇದು ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ. ಇದರಿಂದ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ.