Publish Date: Sun, 08 Jan 2023 (17:40 IST)
Updated Date: Sun, 08 Jan 2023 (18:07 IST)
ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ ಅವರ ಚಿತಾಭಸ್ಮವನ್ನು ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ಸಂಗಮದಲ್ಲಿ ವಿಸರ್ಜನೆ ಮಾಡಲಾಗಿದೆ. ಜ್ಞಾನ ಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಚಿತಾಭಸ್ಮವನ್ನು ವಿಸರ್ಜಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದ ಬಳಿ ಚಿತಾಭಸ್ಮ ವಿಸರ್ಜನೆ ಮಾಡಲಾಗಿದ್ದು, ಮಠಾಧೀಶರು ವಿಶೇಷ ವಾಹನಗಳಲ್ಲಿ ಚಿತಾಭಸ್ಮ ತಂದು ಬೋಟ್ಗಳಲ್ಲಿ ತೆರಳಿ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿದ್ದಾರೆ. ಮೊದಲಿಗೆ ಕೂಡಲಸಂಗಮೇಶ್ವರನ ಆವರಣದಲ್ಲಿ ಪೂಜೆ ಪುನಸ್ಕಾರ ಸಲ್ಲಿಸಿ, ಬಳಿಕ ತ್ರಿವೇಣಿ ಸಂಗಮದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಈ ಪುಣ್ಯ ಕಾರ್ಯದಲ್ಲಿ ಬಸವಲಿಂಗ ಸ್ವಾಮೀಜಿ, ಪಂಚಮಸಾಲಿ ಬಸವಜಯಮೃತ್ಯುಂಜಯ ಸ್ವಾಮೀಜಿ, ಜ್ಞಾನಯೋಗಾಶ್ರಮದ ಸ್ವಾಮೀಜಿಗಳು ಭಾಗಿಯಾಗಿದ್ದರು. ಚಿತಾಭಸ್ಮ ನೋಡುವುದಕ್ಕೆ ಸಹಸ್ರಾರು ಜನ ಭಕ್ತರು ಆಗಮಿಸಿದ್ದರು.