ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ 'ಏಕ್ ಲವ್ ಯಾ ಚಿತ್ರ ತಂಡ ಅನಗತ್ಯವಾಗಿ ವಿವಾದಕ್ಕೆ ಸಿಲುಕಿಕೊಂಡಿದ್ದೂ ಅಲ್ಲದೇ ನಿರ್ದೇಶಕ ಪ್ರೇಮ್, ನಟಿ ರಚಿತಾ ರಾಮ್ ಸೇರಿದಂತೆ ಇಡೀ ಚಿತ್ರ ತಂಡ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.
ಹೌದು, ಇತ್ತೀಚೆಗೆ ನಡೆದ ಏಕ್ ಲವ್ ಯಾ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ನಮಿಸಿ, ಶ್ರದ್ದಾಂಜಲಿ ಸಲ್ಲಿಸಲಾಗಿತ್ತು.ಅದೇ ವೇದಿಕೆಯಲ್ಲಿ ಪುನೀತ್ ಭಾವಚಿತ್ರದ ಎದುರು ಚಿತ್ರತಂಡ ಶಾಂಪೇನ್ ಬಾಟಲ್ ತೆರೆದು ಸಂಭ್ರಮಾಚರಣೆಯೊಂದಿಗೆ ಹಾಡು ಬಿಡುಗಡೆ ಮಾಡಿತ್ತು.
ಏಕ್ ಲವ್ ಯಾ ಚಿತ್ರ ತಂಡದ ಈ ಪ್ರಮಾದಕ್ಕೆ ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪುನೀತ್ ನಿಧನರಾಗಿ ಇನ್ನೂ 15 ದಿನಗಳಾಗಿಲ್ಲ, ಎಲ್ಲರೂ ಶೋಕದಲ್ಲಿರುವಾಗ ಅವರ ಫೋಟೋ ಮುಂದೆ ಶಾಂಪೇನ್ ಸಂಭ್ರಮವೇಕೆ ಎಂದು ಹಲವರು ಪ್ರಶ್ನಿಸಿದ್ದರು. ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ರಾಜ್ಯ ವಾಣಿಜ್ಯ ಚಲನಚಿತ್ರ ಮಂಡಳಿಯ ಪದಾಧಿಕಾರಿ ಸಾರಾ ಗೋವಿಂದ್ ಅವರು ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು.