ಬೆಂಗಳೂರು: ಕ್ರಾಂತಿಕಾರಿ ನಾಯಕ, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರು ಒಬ್ಬ ಬ್ರಾಹ್ಮಣ. ಆದರೆ ಮಾಂಸಾಹಾರ ಸೇವಿಸುತ್ತಿದ್ದರು ಎಂದು ಸಚಿವ ದಿನೇಶ್ ಗುಂಡೂರಾವ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಸಾವರ್ಕರ್ ಒಬ್ಬ ಚಿತ್ಪಾವನ ಬ್ರಾಹ್ಮಣ. ಅವರು ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಅವರು ಗೋಹತ್ಯೆಗೂ ವಿರೋಧವಾಗಿರಲಿಲ್ಲ ಎಂದು ಗಾಂಧಿ ಜಯಂತ್ರಿ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿವಾದಿತ ಮಾತುಗಳನ್ನಾಡಿದ್ದಾರೆ.
ಅವರ ಈ ಹೇಳಿಕೆಗೆ ಈಗ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಾವರ್ಕರ್ ಮೂಲಭೂತವಾದಿಯಾಗಿದ್ದರು. ಅವರು ಮಾಡರ್ನ್ ಆಗಿದ್ದರು. ಗೋಮಾಂಸವನ್ನೂ ಸೇವಿಸುತ್ತಿದ್ದರು ಎಂದು ಜನ ಹೇಳುತ್ತಿದ್ದಾರೆ. ಸಾವರ್ಕರ್ ಬಹಿರಂಗವಾಗಿಯೇ ಮಾಂಸಾಹಾರಸೇವನೆ ಮಾಡಲು ಹೇಳುತ್ತಿದ್ದರು ಎಂದಿದ್ದಾರೆ.
ಇನ್ನು, ದಿನೇಶ್ ಗುಂಡೂರಾವ್ ಹೇಳಿಕೆ ವೈರಲ್ ಆಗುತ್ತಿದ್ದಂತೇ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್ ಅಶೋಕ್, ಕಾಂಗ್ರೆಸ್ ನವರಿಗೆ ಹಿಂದೂಗಳ ಟೀಕೆಯೇ ಧರ್ಮವಾಗಿದೆ ಎಂದಿದ್ದಾರೆ. ಸಾವರ್ಕರ್ ಸತ್ತು ಸ್ವರ್ಗದಲ್ಲಿದ್ದಾರೆ. ಅವರನ್ನಾದರೂ ಬಿಡಿ. ಹೆಣ್ಣು ಮಕ್ಕಳು ಬಳೆಯೂ ಹಾಕಬಾರದು ಎಂಬ ಸ್ಥಿತಿಗೆ ಕಾಂಗ್ರೆಸ್ ಬರುತ್ತದೆ. ನಿಮ್ಮ ಟೀಕೆ ಏನಿದ್ದರೂ ಹಿಂದೂಗಳ ಬಗ್ಗೆ ಮಾತ್ರ. ಮುಸ್ಲಿಮರ ಬಗ್ಗೆ ಏನಾದರೂ ಮಾತನಾಡುತ್ತೀರಾ ಎಂದು ಕಿಡಿ ಕಾರಿದ್ದಾರೆ.