Select Your Language

Notifications

webdunia
webdunia
webdunia
webdunia

ಧಾರವಾಡ ಕೃಷಿ ವಿವಿ ಯಡವಟ್ಟು: ರೈತರ ಬದುಕು ಹಾಳಾಗೋಯ್ತು

ಧಾರವಾಡ ಕೃಷಿ ವಿವಿ ಯಡವಟ್ಟು: ರೈತರ ಬದುಕು ಹಾಳಾಗೋಯ್ತು
ಹಾವೇರಿ , ಸೋಮವಾರ, 24 ಅಕ್ಟೋಬರ್ 2016 (13:58 IST)

ಹಾವೇರಿ: ಮೊದಲೇ ಮಳೆ ಇಲ್ಲ.. ಅದರಲ್ಲೂ ಅಷ್ಟೋ ಇಷ್ಟೋ ಆದ ಮಳೆಗೆ ರೈತರು ಸಾಲ ಸೋಲ ಮಾಡಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ರು. ಹೇಗೋ ಬಿತ್ತನೆ ಮಾಡಿದೀವಿ. ಉತ್ತಮ ಫಸಲು ಬರಲಿಲ್ಲ ಅಂದರೂ, ಹೊಟ್ಟೆ ತುಂಬೋವಷ್ಟು ಬರುತ್ತೆ, ಹೇಗೋ ಜೀವನ ಸಾಗುತ್ತೆ ಅಂತಾ ರೈತರು ಲೆಕ್ಕಹಾಕಿದ್ದರು. ಆದರೆ ಅವರ ಲೆಕ್ಕವೆಲ್ಲ ಉಲ್ಟಾ ಹೊಡೆದಿದೆ.
 


 

ಹೌದು, ಧಾರವಾಡ ಕೃಷಿ ವಿವಿ ನೀಡಿದ ಬೀಜಗಳನ್ನ ಬಿತ್ತಿದ್ದ ಹಾವೇರಿ ಜಿಲ್ಲೆಯ ರೈತರೀಗ ಕಂಗಾಲಾಗಿದ್ದಾರೆ. ಸರಿಯಾದ ಸಮಯಕ್ಕೆ ಬರಬೇಕಿದ್ದ ಬೆಳೆ ಬಾರದೇ ಹಾಳಾಗಿದೆ. ತಾಲೂಕಿನ ಚಂದಾಪುರ, ಚೌಡಯ್ಯದಾನಪುರ ಹಾಗೂ ಮಾಕನೂರ ಗ್ರಾಮದ 60ಕ್ಕೂ ಅಧಿಕ ರೈತರು 250 ಕ್ಕೂ ಅಧಿಕ ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದರು. ಭತ್ತ ಕಾಳು ಹಿಡಿಯದೇ ಜೊಳ್ಳಾಗಿದೆ.ಇನ್ನು ಹಾನಗಲ್ ತಾಲೂಕಿನಲ್ಲೂ ಪರಿಸ್ಥಿತಿ ಬೇರೆನೇಲ್ಲ. ಕೃಷಿ ವಿವಿ ಸಂಶೋಧಿಸಿ ನೀಡಿದ ಗೋವಿನ ಜೋಳ ರೈತರಲ್ಲಿ ನಿರಾಸೆ ಮೂಡಿಸಿದೆ. ಸುಮಾರು 60ಕ್ಕೂ ಅಧಿಕ ಎಕರೆಯಲ್ಲಿ ಬೆಳೆಯಲಾಗಿದ್ದ ಬೆಳೆ ಕಾಯಿ ಕಟ್ಟದೇ ಒಣಗಿದೆ.

 

ರೈತರನ್ನು ಮೆತ್ತಗೆ ಮಾಡಿದ ಹತ್ತಿ
 

ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿಯ ಕೆಲವು ರೈತರು ಹತ್ತಿಯನ್ನು ಬೆಳೆದು ಬಂಗಾರದ ಬದುಕು ಸಾಗಿಸಬೇಕು ಎಂದು ಕೊಂಡಿದ್ದರು. ಆದರೆ ಹತ್ತಿ ಗಿಡ ಚೆನ್ನಾಗಿ ಬೆಳೆದಿದ್ದರೂ ಸಹ ಅವುಗಳಲ್ಲಿ ಹೂವು, ಕಾಯಿ ಕಾಣದಂತೆ ಆಗಿದೆ. 

ಮಳೆಯ ಕೊರತೆಯಿಂದ ಮೆಕ್ಕೇಜೋಳ ಕೈಕೊಟ್ಟಿದೆ. ಈರುಳ್ಳಿ ರೈತನ ಕಣ್ಣಲ್ಲಿ ನೀರು ತರಿಸಿದೆ. ಹೀಗಿರುವಾಗ ನೆಗಳೂರು ಗ್ರಾಮದಲ್ಲಿಯ ನೀರಾವರಿ ಪ್ರದೇಶಗಳ ಸುಮಾರು 25 ಎಕರೆಗೂ ಹೆಚ್ಚು ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆ ಹೂವು ಬಿಡದೇ ರೈತರ ಕನಸನ್ನು ನುಚ್ಚುನೂರು ಮಾಡಿದೆ. 

 

ತಜ್ಞರ ತಂಡ ಭೇಟಿ, ಪರಿಶೀಲನೆ

ಜಿಲ್ಲೆಯಲ್ಲಿನ ಈ ಪರಿಸ್ಥಿತಿ ಕಂಡ ರೈತರು ಕೃಷಿ ಅಧಿಕಾರಿಗಳಿಗೆ ಬೆಳೆಯ ಬಗ್ಗೆ ವಿವರಿಸಿದ್ದಾರೆ. ಇದನ್ನ ಅರಿತ ತಜ್ಞರ ತಂಡ ಹೊಲ ಗದ್ದೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿತು. ಭತ್ತದ ಬೀಜದಿಂದ ಬೆಳೆ ಹಾಳಾಗಿಲ್ಲ, ಬದಲಿಗೆ ರೋಗದ ಸಮಸ್ಯೆಯಿಂದ ಹಾಳಾಗಿದೆ ಎಂದು ಸಬೂಬು ನೀಡಿದ್ದಾರೆ. ಜೊತೆಗೆ ಭತ್ತದ ಬೆಳೆಯನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ. ಹಾನಗಲ್ಲ ತಾಲೂಕಿಗೂ ಭೇಟಿ ನೀಡಿದ ತಂಡ, ನಾವು ನೀಡಿದ ಬೀಜ ಶಿವಮೊಗ್ಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಉತ್ತಮವಾಗಿಯೇ ಬಂದಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಮಾತ್ರ ಮಳೆಯಾಗದೇ ಇರುವುದರಿಂದ ಹೀಗಾಗಿದೆ ಎಂದಿದ್ದಾರೆ. 

 

ಪರಿಹಾರಕ್ಕೆ ಕೊಕ್ಕೆ

ಬೆಳೆ ಹಾನಿಯಾಗದ್ದಕ್ಕೆ ಪರಿಹಾರ ನೀಡಲು ರೈತರು ಒತ್ತಾಯಿಸುತ್ತಿದ್ದಂತೆ,  ಧಾರವಾಡ ಕೃಷಿ ವಿಶ್ವವಿದ್ಯಾಲಯದ 60 ವರ್ಷಗಳ ಇತಿಹಾಸದಲ್ಲಿ ಪರಿಹಾರ ನೀಡಿದ ಸಂದರ್ಭಗಳಿಲ್ಲ. ಆದರೆ ರೈತರನ್ನು ಪ್ರೋತ್ಸಾಹಿಸಿಲು ಪರ್ಯಾಯ ವ್ಯವಸ್ಥೆ ಮಾತ್ರ ಸಾಧ್ಯ ಎಂದು ಆಗಮಿಸಿದ ಅಧಿಕಾರಿಗಳು ತಿಳಿಸಿದ್ದಾರೆ.

 

ಮಳೆ ಇಲ್ಲದಕ್ಕೆ ಇಳುವರಿ ಕುಂಠಿತ

ಕರ್ನಾಟಕದಲ್ಲಿ 14 ಲಕ್ಷ ಹೆಕ್ಟೆರ್ ಭೂಮಿಯಲ್ಲಿ ಗೋವಿನ ಜೋಳ ಬಿತ್ತನೆ ನಡೆಯುತ್ತದೆ. ಇಡೀ ರಾಜ್ಯದಲ್ಲಿ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳು ಪ್ರಥಮ ಸ್ಥಾನದಲ್ಲಿವೆ. ಈ ಜಿಲ್ಲೆಗಳಲ್ಲಿ ತಲಾ 1.5 ಲಕ್ಷ ಹೆಕ್ಟೆರ್ ಬಿತ್ತನೆ ಆಗಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಇನ್ನೂ 14 ಗೋವಿನ ಜೋಳ ತಳಿಗಳು ಸಂಶೋಧನೆಯಾಗಿ ಬಿಡುಗಡೆಗೆ ಸಿದ್ಧವಾಗಿವೆ. ಖಾಸಗಿ ಕಂಪನಿಗಳು ನೂರಾರು ತಳಿಗಳನ್ನು ಸಂಶೋಧಿಸಿ ಬಿತ್ತನೆಗೆ ಬಿಟ್ಟಿವೆ. ಆದರೆ ಸಕಾಲಿಕವಲ್ಲದ, ಕಡಿಮೆ ಮಳೆ ಕಾರಣದಿಂದಾಗಿ ಬೆಳೆ ಇಳುವರಿ ಕಡಿಮೆಯಾಗಿದೆ ಎಂದು ಕೃಷಿ ವಿವಿ ಧಾರವಾಡದ ಗೋವಿನ ಜೋಳ ತಜ್ಞ ವಿಜ್ಞಾನಿ ಎಂ.ಸಿ.ವಾಲಿ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

85 ಸಾವಿರ ಪೌಂಡ್ ಗೆ ಹರಾಜಾದ ಟೈಟಾನಿಕ್ ಲಾಕರ್ ಕೀ