ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಇಂದು ಶೋಧ ಕಾರ್ಯವನ್ನು ಆರಂಭಿಸಿದೆ.
ಸಾಕ್ಷಿ ದೂರುದಾರ ಪೊಲೀಸರಿಗೆ ತಂದೊಪ್ಪಿಸಿದ್ದ ತಲೆಬುರುಡೆಯನ್ನು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕ ಬಂಗ್ಲೆಗುಡ್ಡೆಯ ಕಾಡಿನಿಂದ ಹೊರತೆಗೆಯಲಾಗಿತ್ತು.
ತಲೆಬುರುಡೆವಿದ್ದ ಜಾಗಗವನ್ನು ತೋರಿಸಿದ್ದ ವಿಠಲ ಗೌಡನನ್ನು ಎಸ್ಐಟಿ ಅಧಿಕಾರಿಗಳು ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ವ್ಯಾಪ್ತಿಯಲ್ಲಿರುವ ಈ ಕಾಡಿನ ಒಳಗೆ ಈಚೆಗೆ ಕರೆದೊಯ್ದು ಮಹಜರು ನಡೆಸಿದ್ದರು. ಈ ವೇಳೆ ನೆಲದ ಮೇಲೆಯೇ ಮೃತದೇಹಗಳ ಅವಶೇಷ ಸಿಕ್ಕಿವೆ ಎನ್ನಲಾಗಿತ್ತು.
ಆ ಜಾಗದಲ್ಲಿ ಬುರುಡೆ ಸಿಕ್ಕಿದ್ದ ಸ್ಥಳದ ಮಹಜರಿಗೆ ತೆರಳಿದ್ದಾಗ ಕಾಡಿನಲ್ಲಿ ಒಂದು ಕಡೆ ಮೂರು ಮೃತದೇಹಗಳ ಹಾಗೂ ಇನ್ನೊಂದು ಕಡೆ ಎಂಟು ಮೃತದೇಹಗಳಿಗೆ ಸಂಬಂಧಿಸಿದ ಅವಶೇಷಗಳು ಕಾಣಿಸಿದ್ದವು ಎಂದು ವಿಠಲ್ ಗೌಡ ವಿಡಿಯೋ ಹೇಳಿಕೆಯಲ್ಲಿ ಹೇಳಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಎಸ್‌ಐಟಿ ಅಧಿಕಾರಿಗಳು, ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ಅಧಿಕಾರಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಕಙದಾಯ ಇಲಾಖೆ ಅಧಿಕಾರಿ ಹಾಗೂ ಕಾರ್ಮಿಕರನ್ನು ಒಳಗೊಂಡ ತಂಡವು ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನ ಒಳಗೆ ತೆರಳಿದೆ. ಎಸ್ಐಟಿ ಎಸ್ ಪಿಯವರಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಸಿ.ಎ.ಸೈಮನ್ ಅವರು ಸ್ಥಳದಲ್ಲಿದ್ದಾರೆ.