ರಾಯಚೂರು: ಇಲ್ಲಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಅವ್ಯವಸ್ಥೆಯ ಗೂಡಾಗಿದ್ದು, ಇದೀಗ ಸಭೆ ನಡೆಯುತ್ತಿರುವಾಗಲೇ ಅರಣ್ಯ ಸಂರಕ್ಷಣಾಧಿಕಾರಿ ಮೊಬೈಲ್‌ನಲ್ಲಿ ರಮ್ಮಿ ಆಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧದ ವಿಡಿಯೋ ವೈರಲ್ ಆಗಿದೆ.
ಸಭೆಯ ಗೌರವನ್ನು ಕಾಯ್ದುಕೊಳ್ಳುವಂತೆ ಜಿಲ್ಲೆಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರನ್ನು ತರಾಟೆ ತೆಗೆದುಕೊಳ್ಳುತ್ತಿದ್ದ ವೇಳೆಯೇ ಈ ಘಟನೆ ನಡೆದಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಅವರು ಸಭಾಂಗಣದಲ್ಲೇ ಕುಳಿತು ಬಹಳ ಹೊತ್ತಿನವರೆಗೂ ಮೊಬೈಲ್‌ನಲ್ಲಿ ರಮ್ಮಿ ಆಡುತ್ತಿದ್ದರು. ಇದನ್ನು ಗಮನಿಸಿದ ಒಬ್ಬರು ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ನೀವು ಗಂಭೀರವಾಗಿಲ್ಲ, ಅಧಿಕಾರಿಗಳು ಗಂಭೀರವಾಗಿಲ್ಲ. ಕನಿಷ್ಠ ಪಕ್ಷ ಶಾಸಕರ ಗೌರವವನ್ನಾದರೂ ಉಳಿಸಿ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸುತ್ತಿರುವಾಗಲೇ ವಿಡಿಯೊ ತೆಗೆಯಲಾಗಿದೆ. ಈ ಸಂದರ್ಭದಲ್ಲಿ ಒಂದೊಂದು ಅಧಿಕಾರಿಗಳು ಮೂಗಲ್ಲಿ ತೋರು ಬೆರಳು, ಇನ್ನೊಬ್ಬರು ಕಿವಿಯಲ್ಲಿ ಪೆನ್ನು ಹಾಕಿ ತಿರುವಿಕೊಳ್ಳುತ್ತಿದ್ದರು.
ಅದಲ್ಲದೆ ಪತ್ರಕರ್ತರ ಆಸನದಲ್ಲೂ ಬೇರೆಯವರು ಕೂತು, ಜಾಗ ಇಲ್ಲದ ಕಾರಣ ಪತ್ರಕರ್ತರು ಶಾಸಕರ ಜಾಗದಲ್ಲಿ ಕುಳಿತುಕೊಂಡಿದ್ದರು. ಒಟ್ಟಾರೆ ಸಭೆ ಅವ್ಯವಸ್ಥೆಯ ಗೂಡಾಗಿತ್ತು.