ಬೆಂಗಳೂರು : ಸೂಕ್ತ ತಪಾಸಣೆ, ಪ್ರಯೋಗಾಲಯ, ಚಿಕಿತ್ಸೆ ಮತ್ತು ಔಷಧಿಗಳು ಉಚಿತವಾಗಿ ಇಲ್ಲವೇ ಕೈಗೆಟುಕುವ ದರದಲ್ಲಿ ಒಂದೇ ಕಡೆ ಲಭ್ಯವಾಗುವಂತಹ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವು (ಸಿಯುಪಿಎಚ್ಸಿ) ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ.
ಇಡೀ ದೇಶದಲ್ಲೇ ವಿನೂತನವಾಗಿರುವ ಈ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬವಾದ ಶನಿವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ.
ನಗರದಲ್ಲಿ ಪ್ರಪ್ರಥಮವಾಗಿ ಬಿಬಿಎಂಪಿ ಮತ್ತು ಮಣಿಪಾಲ್ ಹೆಲ್ತ್ ಎಂಟರ್ಪ್ರೈಸ್ ಸಹಯೋಗದಲ್ಲಿ ಈ ವಿನೂತನ ಮತ್ತು ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ಹಲವು ಸಾರ್ವಜನಿಕರು ಕೂಡ ದೇಣಿಗೆ ನೀಡಿದ್ದಾರೆ.
ಇಲ್ಲಿ ಪ್ರಯೋಗಾಲಯ, ಡಿಜಿಟಲ್ ಎಕ್ಸ್ರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಪಿಎಫ್ಟಿ ಮತ್ತು ಇಸಿಜಿ ಸೌಲಭ್ಯಗಳು ಸಿಗುತ್ತವೆ. ಇದಲ್ಲದೆ, ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತಹ ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ, ತುರ್ತು ಚಿಕಿತ್ಸಾ ಘಟಕ, ಫಿಸಿಯೋಥೆರಪಿ, ಪ್ರಧಾನಮಂತ್ರಿಗಳ ಜನೌಷಧ ಕೇಂದ್ರ ಎಲ್ಲವೂ ಇಲ್ಲಿ ಲಭ್ಯವಿರಲಿದ್ದು, ಒಳರೋಗಿಗಳ ವಿಭಾಗವೂ ಇದೆ. ಅಲ್ಲದೆ ಆಸ್ಪತ್ರೆಯಲ್ಲಿ ಇಎಂಆರ್ (ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್) ವ್ಯವಸ್ಥೆಯೂ ಇದೆ.