Select Your Language

Notifications

webdunia
webdunia
webdunia
webdunia

ಶೀಘ್ರದಲ್ಲಿ ಶಿಕ್ಷಕರ ನೇಮಕ ಕುರಿತು ನಿರ್ಧಾರ: ಬಿ.ಸಿ ನಾಗೇಶ್

ಶೀಘ್ರದಲ್ಲಿ ಶಿಕ್ಷಕರ ನೇಮಕ ಕುರಿತು ನಿರ್ಧಾರ: ಬಿ.ಸಿ ನಾಗೇಶ್
bangalore , ಭಾನುವಾರ, 5 ಸೆಪ್ಟಂಬರ್ 2021 (20:52 IST)
ಬೆಂಗಳೂರು: 5 ಸೆಪ್ಟಂಬರ್, 2021. 
 
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕ ಪ್ರಕ್ರಿಯೆಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು. 
 
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ-2021 ಹಾಗೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ‘ನಮ್ಮ ಶಾಲೆ, ನನ್ನ ಕೊಡುಗೆ’ ವೆಬ್ ಪೋರ್ಟಲ್ ಬಿಡುಗಡೆ ಬಳಿಕ ಸಚಿವರು ಮಾತನಾಡಿದರು. 
 
‘ರಾಜ್ಯದ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ವಸ್ತುಸ್ಥಿತಿ ಪರಿಶೀಲನೆ ನಡೆಸಿದ್ದೇನೆ. ಶಿಕ್ಷಕರ ಕೊರತೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರು ಈ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಸಚಿವ ನಾಗೇಶ್ ಹೇಳಿದರು.
 
 
‘ಶಿಕ್ಷಕರ ದಿನವೆಂದರೆ ನಮ್ಮೆಲ್ಲರಿಗೂ ಆದರ್ಶವಾಗಿರುವ ಡಾ. ಎಸ್. ರಾಧಾಕೃಷ್ಣನ್ ಅವರನ್ನು ಜ್ಞಾಪಿಸಿಕೊಳ್ಳುವ ದಿನ. ಶಿಕ್ಷಕರು ಹೇಗೆ ಆದರ್ಶ ಜೀವನ ನಡೆಸಬೇಕು ಎಂದು  ಮಾರ್ಗದರ್ಶನ ನೀಡಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಗಳನ್ನು ಅಲಂಕರಿಸಿ ಆ ಹುದ್ದೆಗಳ ಗೌರವವನ್ನು ಹೆಚ್ಚಿಸಿದರು. ದೇಶ-ವಿದೇಶಗಳಲ್ಲಿ ತತ್ವಜ್ಞಾನದ ಉಪನ್ಯಾಸ ನೀಡಿ ಭಾರತದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋದರು. ತತ್ವಜ್ಞಾನ ವಿಷಯವನ್ನು ಅವರಾಗಿಯೇ ಆಯ್ಕೆ ಮಾಡಿಕೊಂಡು ಓದಲಿಲ್ಲ. ಬದಲಿಗೆ ಬಡತನದ ಕಾರಣ ಅವರ ಅಣ್ಣ ಓದುತ್ತಿದ್ದ ತತ್ವಜ್ಞಾನದ ಪುಸ್ತಕಗಳನ್ನೇ ತೆಗೆದುಕೊಂಡು ಓದಿ ಪದವಿ ಪಡೆದು ದೇಶದ ಅತಿ ದೊಡ್ಡ ತತ್ವಜ್ಞಾನಿಯಾದರು’ ಎಂದು ಸಚಿವ ನಾಗೇಶ್ ನುಡಿದರು. 
 
‘ಪರಿಸ್ಥಿತಿ ಅನಿವಾರ್ಯತೆಯಿಂದ, ಸರ್ಕಾರಿ ಕೆಲಸ ಸಿಕ್ಕಿದೆ ಎಂಬ ಕಾರಣಕ್ಕೂ ಸಾಕಷ್ಟು ಶಿಕ್ಷಕರು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರಬಹುದು. ಆದರೆ, ಶಿಕ್ಷಕರಾದ ಬಳಿಕ ಹೇಗಿರಬೇಕು ಎಂಬುದನ್ನು ತಿಳಿಸಿ ರಾಧಾಕೃಷ್ಣನ್ ಅವರು ಮೇಲ್ಪಂಕ್ತಿ ಹಾಕಿಕೊಟ್ಟರು. ತತ್ವಜ್ಞಾನಿ, ಶಿಕ್ಷಣ ತಜ್ಞ, ಅಂತರಾಷ್ಟ್ರೀಯ ರಾಯಬಾರಿಯಾಗಿ ಭಾರತದ ಗೌರವ ಹೆಚ್ಚಿಸಿದ ರಾಧಾಕೃಷ್ಣನ್ ಅವರು ಅಮೆರಿಕ ಮತ್ತು ರಷ್ಯಾ ನಡುವೆ ಶೀತಲ ಸಮರ ನಡೆಯುತ್ತಿರುವ ಸಂದರ್ಭದಲ್ಲಿ ರಷ್ಯಾಗೆ(ಯುಎಸ್­ಎಸ್­ಆರ್) ತೆರಳಿ ರಷ್ಯಾದೊಂದಿಗೆ ಭಾರತದ ಸಂಬಂಧವನ್ನು ಗಟ್ಟಿಗೊಳಿಸಿದರು. ರಷ್ಯಾದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಪಸರಿಸಿ ಭಾರತದ ಗೌರವವನ್ನು ಹೆಚ್ಚಿಸಿದರು’ ಎಂದು ಸಚಿವರು ತಿಳಿಸಿದರು. 
 
‘ ಸುಮಾರು 48 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಸೇರಿದಂತೆ ಒಟ್ಟು 77 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. 4.20 ಲಕ್ಷ ಶಿಕ್ಷಕರಿದ್ದಾರೆ.
ಶೈಕ್ಷಣಿಕ ಸೇವೆಯಲ್ಲಿ ಮಠ ಮಾನ್ಯಗಳ ಸೇವೆ ಅಪಾರ.  ಎಲ್ಲ ಶಿಕ್ಷಕರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಉತ್ತಮ ರಾಷ್ಟ್ರಕ್ಕಾಗಿ ಶಿಕ್ಷಣ ಅಗತ್ಯವೆಂದು ಚಾಣಕ್ಯ ಹೇಳಿದರು. ದೇಶದಲ್ಲಿ ಸಮಸ್ಯೆಗಳು ಎದುರಾದಾಗ ಶಿಕ್ಷಕರು ಕಾಪಾಡಲು ಬರುತ್ತಾರೆ ಎಂದರು. ಅದರಂತೆ ಕೋವಿಡ್-19 ತುರ್ತು ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಅನೇಕ ಶಿಕ್ಷಕರು ಕೋವಿಡ್ ಕರ್ತವ್ಯ ನಿರ್ವಹಿಸಿದರು. ಶಾಲೆ ಆರಂಭದ ಕುರಿತು ಚರ್ಚೆ ಆರಂಭವಾದಾಗ ಶಿಕ್ಷಕರೇ ಮುಂದೆ ಬಂದರು’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. 
 
‘8.75 ಲಕ್ಷ ಅಭ್ಯರ್ಥಿಗಳಿಗೆ ಎಸ್­ಎಸ್­ಎಲ್­ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಯಶಸ್ವಿಯಾದರು. ಲಭ್ಯವಿರುವ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಶಾಲೆ ಪುನಾರಂಭಕ್ಕೆ ತಯಾರಿ ನಡೆಸಿ ಯಶಸ್ವಿಯಾದರು. ಶಾಲೆ ಆರಂಭಕ್ಕೆ ಒಂದು ತಾಸು ಮೊದಲೇ ಶಾಲೆಗೆ ತೆರಳಿ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಶಿಕ್ಷಣದ ಕುರಿತು ಶಿಕ್ಷಕರು ತೋರಿಸುತ್ತಿರುವ ಆಸಕ್ತಿಯಿಂದ ನನಗೆ ತುಂಬಾ ಸಂತೋಷವಾಗಿದೆ’ ಎಂದು ಸಚಿವ ನಾಗೇಶ್ ಹೇಳಿದರು. 
 
‘ರಾಜ್ಯದ ಕೆಲವು ಶಾಲೆಗಳಲ್ಲಿ ಕೇಂದ್ರ ಸರಕಾರ ಯೋಜನೆ ಅಡಿ ನಿಧಿ ಬಳಸಿಕೊಂಡು ಅತ್ಯುತ್ತಮ ಲ್ಯಾಬ್ ಆರಂಭಿಸಲಾಗಿದೆ. ಆ ಲ್ಯಾಬ್ ನೋಡಿದಾಗ ಐಐಎಸ್­ಸಿ ಲ್ಯಾಬ್ ನೆನಪಾಯಿತು. ಅಷ್ಟು ಚೆನ್ನಾಗಿದೆ’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. 
 
‘ಶಾಲೆಗಳ ಭೌತಿಕ ತರಗತಿಗಳನ್ನು ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಸಕ್ತಿ ಇತ್ತು. ಕೋವಿಡ್ ಅಪಾಯ ಇದೆ ಎಂದು ಗೊತ್ತಿದ್ದರೂ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಶಾಲೆಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದರು. ಶಾಲೆ ಆರಂಭದ ದಿನ ನಮ್ಮೊಂದಿಗೆ ಒಂದು ತಾಸು ಕಾಲ ಕಾಲ ಕಳೆಯುವ ಮೂಲಕ ಮಕ್ಕಳ ಶಿಕ್ಷಣದ ಬಗ್ಗೆ ಅತೀವ ಕಾಳಜಿ ತೋರಿಸಿದರು’ ಎಂದು ಸಚಿವ ನಾಗೇಶ್ ನುಡಿದರು. 
 
‘ಶಾಲೆಗಳ ಭೌತಿಕ ತರಗತಿಗಳ ಆರಂಭ, ಟಿಇಟಿ ಪರೀಕ್ಷೆ, ಪಿಯು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಎಲ್ಲ ಕಾರ್ಯಗಳಲ್ಲಿ ನಮ್ಮ ಶಿಕ್ಷಕರು ಸಹಕಾರ ನೀಡಿ, ಬೆನ್ನೆಲುಬಾಗಿ ನಿಂತರು. ನಮ್ಮ ರಾಜ್ಯದ ಶೇ.50ಕ್ಕೂ ಹೆಚ್ಚು ಶಿಕ್ಷಕರು ಪ್ರಶಸ್ತಿಗೆ ಅರ್ಹರಿದ್ದಾರೆ ಎಂಬ ವಿಶ್ವಾಸವಿದೆ. ಅಂಕ ಆಧಾರದ ಮೇಲೆ ಪ್ರಶಸ್ತಿ ಗೌರವ ನಿರ್ಧರಿಸಲಾಗುತ್ತದೆ. ಹೀಗಾಗಿ, ಕೆಲವರಿಗೆ ಮಾತ್ರ ಬಹುಮಾನ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಬೇರೆ ಶಿಕ್ಷಕರು ಕೂಡ ಪ್ರಶಸ್ತಿಗೆ ಪಾತ್ರರಾಗುತ್ತಾರೆ’ ಎಂದು ಸಚಿವರು ನುಡಿದರು.
 
 
‘ಮೃದನ್ಮಯ, ಅನ್ನಮಯ, ಪ್ರಾಣಮಯ, ಜ್ಞಾನಮಯ, ವಿಜ್ಞಾನಮಯ, ಸುಜ್ಞಾನದ ಕಡೆ ಮನುಷ್ಯ ಹೋಗಬೇಕು. ಅದೇ ಅಂತಿಮ ಗುರಿ ಆಗಬೇಕು. ಮೆದುಳು, ಮನಸ್ಸು, ಸುಕ್ಷಿತರನ್ನಾಗಿಸುವ ಶಿಕ್ಷಣ ಸಿಗಬೇಕು.  ನಿಜವಾದ ಬದುಕು ರೂಪಿಸಿಕೊಳ್ಳುವ ಶಿಕ್ಷಣ ನೀಡಬೇಕು ಎಂದು ರಾಧಾಕೃಷ್ಣನ್, ಮಹಾತ್ಮ ಗಾಂಧಿ ಸೇರಿದಂತೆ ಹಲವು ಮಹಾನೀಯರು ಹೇಳಿದರು. ಆದರೆ, ನಮ್ಮ ದೇಶವನ್ನು ಆಳಿದ ಬ್ರಿಟೀಷರಿಂದ ಶಿಕ್ಷಣ ಪದ್ಧತಿಯೇ ಬೇರೆಯಾಯಿತು. ಬ್ರಿಟೀಷರ ಶಿಕ್ಷಣದ ಬದಲು ಭಾರತದಲ್ಲಿ ಸ್ವಾಭಿಮಾನದ ಶಿಕ್ಷಣ ನೀಡಬೇಕು ಎಂದು ಯೋಜಿಸಿದಾಗ ಏನಾದರೂ ಅಡ್ಡಿ ಎದುರಾಗುತ್ತಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಬದಲಾವಣೆಗೆ ನಾಂದಿ ಹಾಡಿದ್ದಾರೆ. ಹಲವು ವರ್ಷಗಳಿಂದ ಚರ್ಚೆಗಳು, ಸಲಹೆ ಸೂಚನೆಗಳ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ’ ಎಂದು ಸಚಿವರು ಹೇಳಿದರು. 
 
‘ಮುಂದಿನ ವರ್ಷದಿಂದ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ಪ್ರಯತ್ನ ನಡೆದಿದೆ. ಆಗ ಬೇರೆ ಬೇರೆ ತೊಂದರೆಗಳು ಎದುರಾಗಬಹುದು. ಆದರೆ, ರಾಷ್ಟ್ರದ ಹಿತಕ್ಕಾಗಿ ಎಲ್ಲರೂ ಬೆಂಬಲ ನೀಡುತ್ತೀರಿ ಎಂದು  ನಂಬಿದ್ದೇನೆ’ ಎಂದು ಸಚಿವರು ಹೇಳಿದರು.
 
 
 
 ‘ನಮ್ಮ ಶಾಲೆ, ನನ್ನ ಕೊಡುಗೆ’ ವೆಬ್ ಪೋರ್ಟಲ್ ಬಗ್ಗೆ 
 
ಸರ್ಕಾರಿ ಶಾಲೆಗಳ ಕಟ್ಟಡ, ಮೂಲ ಸೌಕರ್ಯಗಳು, ಕಂಪ್ಯೂಟರ್ ಸೇರಿದಂತೆ ಶಾಲೆಗಳ ಅಭಿವೃದ್ಧಿಗೆ ಅಗತ್ಯವಿರುವ ಹಣ, ವಸ್ತುಗಳನ್ನು ಒದಗಿಸಲು ಇಚ್ಛಿಸುವವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ‘ನಮ್ಮ ಶಾಲೆ ನನ್ನ ಕೊಡುಗೆ’  ವೆಬ್ ಪೋರ್ಟಲ್ ಬಿಡುಗಡೆ ಮಾಡಲಾಗಿದೆ. 
 
ದಾನಿಗಳು ನೀಡುವ ಹಣವು ಕೇಂದ್ರ ಕಚೇರಿ ಬ್ಯಾಂಕ್ ಖಾತೆ ಮೂಲಕ ಆಯಾ ಶಾಲೆಗೆ ನೇರವಾಗಿ ತಂತ್ರಾಂಶದ ಮೂಲಕ ಸಂದಾಯವಾಗುವ ರೀತಿಯಲ್ಲಿ ಪೋರ್ಟಲ್ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ. ಪೋರ್ಟಲ್­ಗೆ ಲಾಗಿನ್ ಆಗಿ ತಾವು ಯಾವ ಶಾಲೆಯನ್ನು ಅಭಿವೃದ್ಧಿಪಡಿಸಲು ಇಚ್ಛಿಸುವಿರಿ ಆ ಶಾಲೆಯನ್ನು ಆಯ್ಕೆ ಮಾಡಿಕೊಂಡು ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿ ಮಾಡಬಹುದು. 
 
ನೀವು ಬಯಸಿದ ಶಾಲೆ ಅಭಿವೃದ್ಧಿಗೆ ಆ ಹಣ ಬಳಕೆಯಾಗುತ್ತದೆ. ಶಾಲೆ ಅಭಿವೃದ್ಧಿ ಕುರಿತು ವೆಬ್­ ಪೋರ್ಟಲ್ ಮೂಲಕ ಅಪ್­ಡೇಟ್ ನೀಡಲಾಗುತ್ತದೆ. https://sts.karnataka.gov.in/SATSSA/main/loadHomePage.htm 
 
  
 
ಯಶೋಮಾರ್ಗ ಪುಸ್ತಕ ಬಿಡುಗಡೆ 
 
ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಎಸ್­ಎಸ್­ಎಲ್­ಸಿ ಪರೀಕ್ಷೆ ನಡೆಸಿ ಯಶಸ್ವಿಯಾಗಿರುವ ಕುರಿತು ಸಮಗ್ರ ಮಾಹಿತಿ ದಾಖಲಿಸಿರುವ ‘ಯಶೋಮಾರ್ಗ’ ಪುಸ್ತಕ ಮತ್ತು ಹಿಂದಿನ ವರ್ಷಗಳಲ್ಲಿ ಶಿಕ್ಷಕರ ಪ್ರಶಸ್ತಿ ಸ್ವೀಕರಿಸಿರುವ ಶಿಕ್ಷಕರು, ಉಪನ್ಯಾಸಕರ ಕುರಿತು ಮಾಹಿತಿ ನೀಡುವ ಪುಸ್ತಕವನ್ನು ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. 
 
ಕಾರ್ಯಕ್ರಮದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರಾದ ಎ. ದೇವೇಗೌಡ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಅನ್ಬುಕುಮಾರ್, ಪಿಯು ಮಂಡಳಿ ಆಯುಕ್ತರಾದ ಸ್ನೇಹಲ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
education

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿಯಿಂದ ಶಿಕ್ಷಣ ನೀತಿ ರೂಪಿಸಿದ ತಜ್ಞರಿಗೆ, ಶಿಕ್ಷಕರಿಗೆ ಅಪಮಾನ