ಬೆಂಗಳೂರು: ನೆಲಮಂಗಲ ಭೀಕರ ಅಪಘಾತದಲ್ಲಿ ಶನಿವಾರ ಸಾವೀಗೀಡಾಗಿದ್ದ ಒಂದೇ ಕುಟುಂಬದ ಆರು ಮಂದಿಯನ್ನು ಮಹಾರಾಷ್ಟ್ರದ ಸ್ವಗ್ರಾಮದಲ್ಲಿ ಇಂದು ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇಂದು ಬೆಳಿಗ್ಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೃತದೇಹಗಳು ರವಾನೆಯಾಗಿವೆ. ಮೂರು ಅಂಬುಲೆನ್ಸ್ ಮೂಲಕ ಆರು ಮೃತದೇಹಗಳನ್ನು ಕರೆತರಲಾಗಿದೆ. ಮೃತದೇಹಗಳನ್ನು ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ಚಂದ್ರಮ್ ಅವರ ಜಮೀನಿನಲ್ಲಿ ಲಿಂಗಾಯತ ಸಮಾಜದ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ಮೃತದೇಹಗಳಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿದ ಬಳಿಕ ಬೆಂಕಿ ಸ್ಪರ್ಶಿಸುವ ಮೂಲಕ ಅಂತ್ಯಕ್ರಿಯೆ ನೆರವೇರಿಸಿದರು.
ಬೆಂಗಳೂರು ಹೊರವಲಯದ ನೆಲಮಂಗಲ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿತ್ತು. ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್, ವೋಲ್ವೋ ಕಾರಿನ ಮೇಲೆ ಉರುಳಿದ್ದ ಪರಿಣಾಮ ಕಾರಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಬಲಿ ಆಗಿದ್ದರು. ಮೃತರನ್ನು 48 ವರ್ಷದ ಐಟಿ ಉದ್ಯಮಿ ಚಂದ್ರಮ್ ಯೇಗಪ್ಪಗೋಳ್, 42 ವರ್ಷದ ಗೌರಾಬಾಯಿ, 12 ವರ್ಷದ ದೀಕ್ಷಾ, 6 ವರ್ಷದ ಆರ್ಯ, ಜ್ಞಾನ್ ಏಗಪ್ಪ, 36 ವರ್ಷದ ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.
ಮೃತ ಉದ್ಯಮಿ ಚಂದ್ರಮ್ ಮೂಲತಃ ಮಹಾರಾಷ್ಟ್ರದ ಜತ್ ತಾಲೂಕಿನ ಮೊರಬಗಿ ಗ್ರಾಮದವರು. ಬೆಂಗಳೂರಿನಲ್ಲಿ ಐಎಎಸ್‌ಟಿ ಎಂಬ ಸಂಸ್ಥೆ ಸ್ಥಾಪಿಸಿ, ಹಲವು ಜನಕ್ಕೆ ಕೆಲಸ ಕೊಟ್ಟಿದ್ದರು.