Select Your Language

Notifications

webdunia
webdunia
webdunia
webdunia

ಕೌಶಲ್ಯಮಾಸದ ವರ್ಚುಯಲ್‌ ಉದ್ಯೋಗ ಮೇಳಕ್ಕೆ ಡಿಸಿಎಂ ಚಾಲನೆ

ಕೌಶಲ್ಯಮಾಸದ ವರ್ಚುಯಲ್‌ ಉದ್ಯೋಗ ಮೇಳಕ್ಕೆ ಡಿಸಿಎಂ ಚಾಲನೆ
bangalore , ಶುಕ್ರವಾರ, 23 ಜುಲೈ 2021 (20:19 IST)
ಬೆಂಗಳೂರು: ಕೌಶಲ್ಯಮಾಸದ ಪ್ರಯುಕ್ತ ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ನಿಗಮವು ಶುಕ್ರವಾರ  ಹಮ್ಮಿಕೊಂಡಿದ್ದ ಮೊದಲ ದಿನದ ವರ್ಚುಯಲ್‌ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ 5,000  ಯುವಕ ಯುವತಿಯರ ಪೈಕಿ 1,000 ಯುವಜನರು ವಿವಿಧ ಪ್ರತಿಷ್ಠಿತ ಕಂಪನಿಗಳ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ‌ ತಿಳಿಸಿದರು. 
 
ಬೆಂಗಳೂರಿನಲ್ಲಿ ವರ್ಚುಯಲ್‌ ಮೇಳದಲ್ಲಿ ಪಾಲ್ಗೊಂಡ ನಂತರ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಾಂಕೇತಿಕವಾಗಿ ಕೆಲ ಯುವಕ ಯುವತಿಯರಿಗೆ ನೇಮಕಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು ಎಂದರು. 
 
ಉದ್ಯೋಗಾಂಕ್ಷಿಗಳು ಮತ್ತು ಉದ್ಯೋಗಧಾತ ಕಂಪನಿಗಳ ಜತೆ ಕೌಶಲ್ಯಾಭಿವೃದ್ಧಿ ನಿಗಮವು ಸೇತುವೆಯಾಗಿ ಕೆಲಸ ಮಾಡುತ್ತಿದ್ದು, ಉದ್ಯೋಗ ಮೇಳಗಳು ತಿಂಗಳಪೂರ್ತಿ ಮುಂದುವರಿಯುತ್ತವೆ ಎಂದರು ಉಪ ಮುಖ್ಯಮಂತ್ರಿಗಳು. 
 
ಇಪ್ಪತ್ತಕ್ಕೂ ಹೆಚ್ಚು ಕಂಪನಿಗಳು 
 
ಈ ಮೇಳದಲ್ಲಿ ಎಚ್‌ಜಿಎಸ್‌, ಆದಿತ್ಯ ಬಿರ್ಲಾ, ಸನ್‌ಸೆರಾ ಎಂಜಿನಿಯರಿಂಗ್‌, ಐಬಿಎಂ ಇಂಡಿಯಾ, ವಿಪ್ರೊ, ಟೀಮ್‌ ಲೀಸ್‌, ರಿಲಯನ್ಸ್‌ ಕಂಪನಿಯ ಏಳು ಸಹ ಕಂಪನಿಗಳು, ಅಫ್ರಿಮ್‌ ಡಾಟಾ ಸರ್ವೀಸ್‌, ಡ್ರೀಮ್‌ ಆರ್ಬಿಟ್‌, ಹಿಂದುಜಾ, ವಿಸ್ಟ್ರಾನ್‌, ಪ್ಲಿಪ್‌ಕಾರ್ಟ್‌, ಡಿಎಚ್‌ಎಲ್‌, ಅಲ್‌ ಲಾಜಿಸ್ಟಿಕ್ಸ್‌, ಮೆಡಿಝಿನಿಕಾ, ಮೆಶೋ, ಗ್ರಾಸ್‌ರೂಟ್ಸ್‌ ಬಿಪಿಒ, ಇಂಡಿಯನ್‌ ಮನಿ, ನವತಾ ರೋಡ್‌  ಟ್ರಾನ್ಸ್‌ಪೋರ್ಟ್‌, ಎಕಾಮ್‌ ಎಕ್ಸ್‌ಪ್ರಸ್‌, ಲ್ಯಾಂಡ್‌ಮಾರ್ಕ್‌, ಐಟಿಸಿ, ಕ್ವೆಸ್‌ ಕಾರ್ಪ್‌, ಸ್ಟ್ರೆಪರಾವಾ ಇಂಡಿಯಾ ಸೇರಿ ಇಪ್ಪತ್ತಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿದ್ದವು ಎಂದರು ಡಿಸಿಎಂ. 
 
ಇಡೀ ದೇಶದಲ್ಲಿ ಕರ್ನಾಟಕ ಅವಕಾಶಗಳ ಆಗರವಾಗಿದ್ದು, ಪ್ರತೀ ವರ್ಷವೂ ಸಂಘಟಿತ ವಲಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಭವಿಷ್ಯ ನಿಧಿ ಮತ್ತು ಇಎಸ್‌ಐ ಸೌಲಭ್ಯಕ್ಕೆ ನೋಂದಣಿ ಆಗುತ್ತಿದ್ದಾರೆ. ಇದರ ಜತೆಗೆ, 25,000ಕ್ಕೂ ಹೆಚ್ಚು ವೇತನ ಪಡೆಯುವ ಯುವಕ, ಯುವತಿಯರು ಇದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಉದ್ಯೋಗಕ್ಕೆ ಸೇರುತ್ತಿರುವ ಅಂಕಿ-ಅಂಶಗಳು ಸರಕಾರದ ಬಳಿ ಇವೆ ಎಂದು ಅವರು ಹೇಳಿದರು. 
 
ಸ್ಕಿಲ್‌ ಕನೆಕ್ಟ್‌ ಪೋರ್ಟಲ್: 
 
ರಾಜ್ಯ ಸರಕಾರದ ಕೌಶಲ್ಯಾಭಿವೃದ್ಧಿ ನಿಗಮವು ಸ್ಕಿಲ್‌ ಕನೆಕ್ಟ್‌ ಹೆಸರಿನ https://skillconnect.kaushalkar.com/ ಪೋರ್ಟಲ್‌ ತೆರೆದಿದ್ದು, ಅದರಲ್ಲಿಯೂ ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆ ಮೂಲಕ ಉದ್ಯೋಗಧಾತರು ಮತ್ತು ಉದ್ಯೋಗಾಂಕ್ಷಿಗಳ ಕೊಂಡಿಯಾಗಿ ಅದು ಕೆಲಸ ಮಾಡುತ್ತದೆ ಎಂದು ಡಿಸಿಎಂ ಹೇಳಿದರು. 
 
ಜಪಾನ್‌ನಲ್ಲಿ ಉದ್ಯೋಗಾವಕಾಶ: 
 
ಐದು ಲಕ್ಷ ಭಾರತೀಯರಿಗೆ ಉದ್ಯೋಗಾವಕಾಶ ನೀಡಲು ಜಪಾನ್‌ ಮುಂದೆ ಬಂದಿದ್ದು, ಈ ಬಗ್ಗೆ ಭಾರತ ಸರಕಾರದ ಜತೆ ಒಪ್ಪಂದ ಮಾಡಿಕೊಂಡಿದೆ. ಇದೇ ಇನ್ನಿತರೆ ದೇಶಗಳು ಭಾರತೀಯ ಕುಶಲ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಇಟ್ಟಿವೆ. ಬ್ರಿಟನ್‌ಗೆ 1,000 ಶಶ್ರೂಷಕರನ್ನು ಕಳಿಸುವ ಬಗ್ಗೆಯೂ ಒಪ್ಪಂದ ಆಗಿದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು. 
 
ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್‌ ಗೌಡ, ಇಲಾಖೆಯ ಉಪ ಕಾರ್ಯದರ್ಶಿ ಮಾರುತಿ ಪ್ರಸನ್ನ ಮುಂತಾದ ಹಿರಿಯ ಅಧಿಕಾರಿಗಳು ಹಾಜರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೃಷಿ ಕ್ಷೇತ್ರದ ಪ್ರಮುಖ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ‘ಅಗ್ರಿಕಲ್ಚರಲ್ ಗ್ರ್ಯಾಂಡ್ ಚಾಲೆಂಜಸ್’ ಸ್ಪರ್ಧೆ