ಚಿಕ್ಕ-ಚಿಕ್ಕ ಮಕ್ಕಳು ಕುಡಿಯುವಂತಹ ಹಾಲಿನಿಂದ ಹಿಡಿದು, ಪ್ರತಿ ಆಹಾರವೂ ಕಲಬೆರಕೆಯಾಗುತ್ತಿದ್ದು, ಈ ರೀತಿ ಕಲಬೆರಕೆ ಮಾಡುವವರ ವಿರುದ್ಧ ಕೇಸ್ ಹಾಕಿ ಜೈಲಿಗೆ ಹಾಕಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಈ ರೀತಿಯ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ ನಗರದ ಜಿಲ್ಲಾ ಕೋರ್ಟ್ ರಸ್ತೆಯಲ್ಲಿರುವ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‍ನಲ್ಲಿ ಕಲಬುರಗಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಮತ್ತು ಜಿಲ್ಲೆಯ ಗ್ರಾಹಕ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ “ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2018” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಹಾರ ಕಲಬೆರಕೆ ಪ್ರಕರಣ ನನ್ನ ಕಡೆ ಬಂದಲ್ಲಿ, ಕೂಡಲೇ ಆಹಾರ ಸಂರಕ್ಷಣಾ ಅಧಿಕಾರಿಗಳಿಗೆ ಆಹಾರದ ಮಾದರಿ ಪಡೆದು ಪ್ರಯೋಗಾಲಯದಲ್ಲಿ ಪರೀಕ್ಷಿಸಿಸುವಂತೆ ತಿಳಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳಿಂದ ನಿರಾಪೇಕ್ಷಣಾ ಪತ್ರ (ಎನ್.ಓ.ಸಿ.) ಪತ್ರ ಪಡೆಯದ ಹೊರತು ಯಾವುದೇ ಹೊಸ ಆಹಾರ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದಿಲ್ಲ. ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ಹೇಳಿದ ಅವರು ಈಗಾಗಲೇ ಇರುವ ಅಂಗಡಿಗಳ ಮಾಲೀಕರು ಜನವರಿ 31 ರೊಳಗೆ 100 ರೂ. ಪಾವತಿಸಿ ಆಹಾರ ಸಂರಕ್ಷಣಾ ಅಧಿಕಾರಿಗಳಿಂದ ನಿರಾಪೇಕ್ಷಣಾ ಪತ್ರ ಪಡೆಯಬೇಕು ಎಂದು ತಿಳಿಸಿದರು. ಈ ಅವಧಿಯೊಳಗೆ ನಿರಾಪೇಕ್ಷಣಾ ಪತ್ರ ಪಡೆಯದಿದ್ದರೆ, ಅಂತಹ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.