ಭೂಗತ ಪಾತಕಿ ದಾವೋದ್ ಇಬ್ರಾಹಿಂ ಅರಬ್ ದೇಶಗಳಲ್ಲಿ ಪ್ರಸ್ತುತವೂ ಕೂಡ ಇನ್ನೂ ಕೆಲ ಕೃತ್ಯಗಳನ್ನು ಎಸಗುತ್ತಿದ್ದಾನೆ ಎಂದಿರುವ ರಾಜನ್, ಅವನಿಗೆ ರಾಷ್ಟ್ರದ ಹಲವು ಹಿರಿಯ, ನಿವೃತ್ತ ಪೊಲೀಸ್ ಅಧಿಕಾರಿಗಳು ಸಹಾಯ ಮಾಡುತ್ತಿದ್ದರು ಎಂದು ತಿಳಿಸಿ ಅಧಿಕಾರಿಗಳ ಹೆಸರುಗಳನ್ನೂ ಕೂಡ ಬಹಿರಂಗಗೊಳಿಸಿದ್ದಾನೆ ಎಂಬುದಾಗಿ ಭೂಗತ ಪಾತಕಿ ಚೋಟಾ ರಾಜನ್ ಹೇಳಿದ್ದಾನೆ.
ಇಂಡೋನೇಷ್ಯಾದ ಬಾಲಿ ನಗರದಿಂದ ಸ್ವದೇಶಕ್ಕೆ ಕರೆತರಲಾಗಿರುವ ಭೂಗತ ಪಾತಕಿ ಚೋಟಾ ರಾಜನ್‌ನನ್ನು ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ಅಧಿಕಾರಿಗಳು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದು, ದಾವೋದ್ ಇಬ್ರಾಹಿಂ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.
ಇನ್ನು ಆಸ್ಟ್ರೇಲಿಯಾ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಇಂಡೋನೇಷ್ಯಾ ಪೊಲೀಸರು ಛೋಟಾ ರಾಜನ್‌ನನ್ನು ಅಲ್ಲಿನ ಬಾಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಆ ಬಳಿಕ ಆತನನ್ನು ಭಾರತದ ತನಿಖಾಧಿಕಾರಿಗಳಿಗೆ ಹಸ್ತಾಂತರಿಸಿ ಗಡಿಪಾರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಗೆ ಕರೆ ತಂದಿದ್ದ ಸಿಬಿಐ ಅಧಿಕಾರಿಗಳು, ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.
ರಾಜನ್‌ನನ್ನು ಪ್ರಸ್ತುತ ಭಾರತೀಯ ವಿದೇಶಿ ಗುಪ್ತಚರ ಇಲಾಖೆಯ ಪ್ರಾಥಮಿಕ ಅಂಗ ಸಂಸ್ಥೆಯಾದ ಸಂಶೋಧನಾ ಮತ್ತು ವಿಶ್ಲೇಷಣಾ ಸಂಸ್ಥೆ(ರಾ)ಯ ಅಧಿಕಾರಿಗಳ ತಂಡ ವಿಚಾರಣೆ ನಡೆಸುತ್ತಿದೆ.