Publish Date: Thu, 18 Apr 2024 (15:19 IST)
Updated Date: Thu, 18 Apr 2024 (15:22 IST)
ಶಿವಮೊಗ್ಗ:ಪ್ರಜಾಪ್ರಭುತ್ವದಲ್ಲಿ ಯಾರ ಪರ ಯಾರು ಬೇಕಾದರೂ ಪ್ರಚಾರ ಮಾಡಬಹುದು ಎಂದು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ ಬಗ್ಗೆ ಜೆಡಿಎಸ್ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ದರ್ಶನ್ ಅವರು ಪ್ರಚಾರದಲ್ಲಿ ತೊಡಗಿರುವುದು ತಪ್ಪೇನಿಲ್ಲ ಪ್ರಜಾಪ್ರಭುತ್ವದಲ್ಲಿ ಯಾರ ಪರ ಯಾರು ಬೇಕಾದರೂ ಪ್ರಚಾರ ಮಾಡಬಹುದು. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಲು ಏನಿಲ್ಲ ಎಂದರು.
ಡಿಕೆಶಿ ವಿರುದ್ಧ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಮಾಡಿರುವ ಆರೋಪ 30- 35 ವರ್ಷಗಳ ಹಿಂದಿನ ಕಥೆ. ಅದಕ್ಕೆ ದಾಖಲೆ ಇದೆ ಎಂದು ಗೌಡರೇ ಹೇಳಿದ್ದಾರೆ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ. ಬಿಜೆಪಿಯಲ್ಲಿರುವ ಭಿನ್ನಮತವನ್ನು ಹೈಕಮಾಂಡ್ ಬಗೆಹರಿಸಲಿದೆ ಎಂದರು.